ವಿಶ್ವಗುರು ಬಸವಣ್ಣನವರ ನೂತನ ಮೂರ್ತಿ ಅನಾವರಣ

ಲೋಕದರ್ಶನ ವರದಿ

ಬೈಲಹೊಂಗಲ 18: ಬಸವ ತತ್ವ ಪರಿಪಾಲನೆಯಿಂದ ಮನುಷ್ಯನ ಮನಸ್ಸು ಶುದ್ದಿಯಾಗಲಿದ್ದು ವಚನ ಸಾಹಿತ್ಯ ಪ್ರತಿಯೊಬ್ಬರು ಓದಿ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದು ಬಾಗಲಕೋಟೆ ಶಿರೂರಿನ ಮಹಾಂತ ತೀರ್ಥ ಮಠದ ಬಸವಲಿಂಗ ಸ್ವಾಮೀಜಿ ಹೇಳಿದರು.

   ಅವರು ಪಟ್ಟಣದ ಮಿನಿ ವಿಧಾನಸೌಧ ಮುಂಬಾಗದಲ್ಲಿ ಗುರುವಾರ ಜರುಗಿದ  ಜಗಜ್ಯೋತಿ ಬಸವೇಶ್ವರ ಉದ್ಯಾನವನದಲ್ಲಿ  ನೂತನ ಬಸವಣ್ಣನ ಮೂರ್ತಿ ಅನಾವರಣ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ ಭಾರತ ಸಂವಿಧಾನ ರಚಿಸಿದರೆ ಬಸವಾದಿ ಶರಣರು 12 ನೇ ಶತಮಾನದಲ್ಲಿ ವಿಶ್ವಕ್ಕೆ ಮಾದರಿಯಾಗುವ ಸಾಹಿತ್ಯ ರಚಿಸಿ ಸಮಾಜದಲ್ಲಿ ಸಮಾನತೆ ತಂದಿದ್ದಾರೆ. ಶರಣರು ಕಲ್ಪಿಸಿದ ವೈಜ್ಞಾನಿಕ ಕೊಡುಗೆಯಾದ ಲಿಂಗಪೂಜೆ ಮಾಡಿ ಬದುಕನ್ನು ಸಾರ್ಥಕಪಡಿಸಿಕೊಳ್ಳಿ. ಲಿಂಗಾಯತರ ಹೊಟ್ಟೆಯಲ್ಲಿ ಹುಟ್ಟಿದರೆ ಲಿಂಗಾಯತ ಅಲ್ಲ. ಹಣ ಇದ್ದವ ಹಣವಂತ, ಗುಣ ಇದ್ದವ ಗುಣವಂತ, ಬುದ್ದಿ ಇದ್ದವ ಬುದ್ದಿವಂತನಾದರೆ ಲಿಂಗ ಇದ್ದವನೇ ಲಿಂಗವಂತನೆಂದರು. 

     ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಶಾಖಾ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ,  ಹುಬ್ಬಳ್ಳಿಯ ಎರಡೆತ್ತಿನಮಠದ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಐತಿಹಾಸಿಕ ಬೈಲಹೊಂಗಲ ನಾಡು ಬಸವಾದಿ ಶರಣರು ಪಾದಸ್ಪರ್ಶ ಮಾಡಿದ ಭೂಮಿಯಲ್ಲಿ ನಾವು ನೀವೆಲ್ಲರು ಜನ್ಮ ತಾಳಿರುವದು ಪುಣ್ಯವಂತರಾಗಿದ್ದೇವೆ. ಸಾಧಕರು, ಶರಣರ ಮಾರ್ಗದರ್ಶನದಲ್ಲಿ ಸಾಗಿ ಪರೋಪಕಾರವೇ ಮುಖ್ಯ ಧ್ಯೇಯವನ್ನಾಗಿಸಿಕೊಂಡು ಮುನ್ನಡೆಯಬೇಕೆಂದರು.

     ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಬಸವೇಶ್ವರ ನೂತನ ಮೂರ್ತಿಯನ್ನು ಶ್ರೀಗಳ ಸಮ್ಮುಖದಲ್ಲಿ  ಅನಾವರಣಗೊಳಿಸಿದರು. 

    ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಗುರು ಬಸವಣ್ಣನವರ ಮೂರ್ತಿ ಅನಾವರಣಗೊಂಡಿರುವದು ಸಂತಸವಾಗಿದೆ. ಬಸವಾದಿ ಶರಣರ ಆದರ್ಶ ತತ್ವಗಳನ್ನು ಜೀವನದಲ್ಲಿ ಮೈಗೊಡಿಸಿಕೊಳ್ಳವದು ಅಗತ್ಯವಾಗಿದೆ ಎಂದರು. ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ ಮಾತನಾಡಿದರು.

       ವೇದಿಕೆ ಮೇಲೆ ಪಂಚಮಸಾಲಿ ಸಮಾಜದ ತಾಲೂಕಾ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ, ನಿವೃತ ಶಿಕ್ಷಕ ಜಿ.ಬಿ.ತುರಮರಿ, ಪುರಸಬೆ ಸದಸ್ಯೆ ವಾಣಿ ಪತ್ತಾರ, ರೋಟರಿ ಅಧ್ಯಕ್ಷ ಸಿ.ಬಿ.ಗಣಾಚಾರಿ, ಶಂಕರ ಗುಡಸ, ಶೋಭಾ ಛಬ್ಬಿ, ಬಸವ ಪ್ರತಿಷ್ಠಾನ ಅಧ್ಯಕ್ಷ ಮಹೇಶ ಕೋಟಗಿ, ತಾಲೂಕಾ ಇಂಜನೀಯರ್ ಸಂಘದ ಮಾಜಿ ಅಧ್ಯಕ್ಷ ಮಹಾಂತೇಶ ಮೂಗಿ ಇದ್ದರು. 

    ವೇ.ವಿಶ್ವನಾಥ ಹಿರೇಮಠ, ಬಸಪ್ಪ ಬನಶೆಟ್ಟಿ, ಶ್ರೀಶೈಲ ಶರಣಪ್ಪನವರ, ಕನ್ನಡ ಸಾಹಿತ್ಯ ಪರಿಷತ್ತಿನ್ ಮಾಜಿ ಜಿಲ್ಲಾಧ್ಯಕ್ಷ ಮೋಹನ ಪಾಟೀಲ, ತಾಲೂಕಾ ಕಜಾಪ ಅದ್ಯಕ್ಷ ಚಂದ್ರಶೇಖರ ಕೊಪ್ಪದ, ಬಸವರಾಜ ಶಿಂತ್ರಿ, ಪತ್ರಿ ಬಸವ ನಗರ ಅಭಿವೃದ್ದಿ ಸಂಘದ ಅಧ್ಯಕ್ಷ್ಯೆ ಪ್ರೇಮಕ್ಕಾ ಅಂಗಡಿ, ಪುರಸಭೆ ಸದಸ್ಯ ಗುರು ಮೆಟಗುಡ್, ಶೋಭಾ ಛಬ್ಬಿ, ಡಿ.ಎನ್.ಸಾಲಿಮಠ, ಎಸ್.ವಿ.ತೊರಗಲ್ಮಠ, ಎಂ.ಬಿ.ಹಿರೇಮಠ, ಮಲ್ಲೇಶಪ್ಪ ಕುಂಕೂರ, ಅಶೋಕ ಜವಳಿ, ಮಹಾಂತೇಶ ಹೊಸಮನಿ, ಸದ್ಭಾವನಾ ಸೇವಾ ಸಮೀತಿ, ರಾಷ್ಟ್ರೀಯ ಬಸವ ದಳ, ಲಿಂಗಾಯತ ಸಂಘಟನೆ, ಅಕ್ಕನ ಬಳಗದ ಸದಸ್ಯರು ಇದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಂದ ವಚನ ಗಾಯನ, ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು.

  ಸದ್ಭಾವನಾ ಸೇವಾ ಸಮೀತಿ ಅಧ್ಯಕ್ಷ ಐ.ಎಲ್.ಪಾಟೀಲ ಸ್ವಾಗತಿಸಿದರು. ಶಿಕ್ಷಕ ಎಸ್.ಎಮ್.ಪಾಟೀಲ ನಿರೂಪಿಸಿದರು. ಶರಣ ನಿಂಗಪ್ಪಾ ಬೂದಿಹಾಳ ವಂದಿಸಿದರು.