ನವದೆಹಲಿ, ಫೆ 12 ; ಗಗನಕ್ಕೇರಿದ್ದ ತರಕಾರಿ ಮತ್ತು ಈರುಳ್ಳಿ ಬೆಲೆ ಇಳಿಯುತ್ತಿದ್ದಂತೆ ಗ್ರಾಹಕರಿಗೆ ಇದೀಗ ಮತ್ತೊಂದು ಹೊಡೆತ ಬಿದ್ದಿದ್ದು, ಅಡುಗೆ ಅನಿಲ ಸಿಲಿಂಡರ್ (ಎಲ್ ಪಿ ಜಿ) ಬೆಲೆ ಭಾರೀ ಹೆಚ್ಚಳವಾಗಿದೆ.
ಎಲ್ಪಿಜಿ ಸಿಲಿಂಡರ್ಗಳು ಸರಾಸರಿ ಶೇ. 20ರಷ್ಟು ಏರಿಕೆಯಾಗಿದೆ. ಬೆಂಗಳೂರು ಸೇರಿದಂತೆ ದೇಶದ ಎಲ್ಲ ಮೆಟ್ರೋ ನಗರಗಳಲ್ಲಿ ಇಂದಿನಿಂದಲೇ ಸಬ್ಸಿಡಿರಹಿತ ಸಿಲಿಂಡರ್ ಗಳ ಬೆಲೆ ಭಾರೀ ಏರಿಕೆಯಾಗಲಿದೆ.
ಇದಕ್ಕೂ ಮೊದಲು ಗ್ಯಾಸ್ ಸಿಲಿಂಡರ್ ಗಳ ಬೆಲೆಯಲ್ಲಿ 19 ರೂಪಾಯಿ ಏರಿಕೆಯಾಗಿತ್ತು. ಇದೀಗ ಮತ್ತೆ ಹೆಚ್ಚಳವಾಗಿರುವ ಸಿಲಿಂಡರ್ ಬೆಲೆಯಿಂದ ಗ್ರಾಹಕರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ.
ಒಟ್ಟಾರೆ ಶೇ. 20ರಷ್ಟು ಎಲ್ಪಿಜಿ ಸಿಲಿಂಡರ್ಗಳ ಬೆಲೆ ಏರಿಕೆಯಾದಂತಾಗಿದೆ. ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಮೆಟ್ರೋ ನಗರಗಳಲ್ಲಿ ಹೆಚ್ಚಳವಾಗಿದೆ.
ದೆಹಲಿಯಲ್ಲಿ 14.2 ಕೆ.ಜಿ. ತೂಕದ ಎಲ್ಪಿಜಿ ಸಿಲಿಂಡರ್ಗಳ ಬೆಲೆ 858.50 ರೂ. (144.50 ರೂ. ಹೆಚ್ಚಳ) ಇದೆ. ಕೊಲ್ಕತಾದಲ್ಲಿ 896 ರೂ. (149 ರೂ. ಹೆಚ್ಚಳ), ಮುಂಬೈನಲ್ಲಿ 829.50 (145 ರೂ. ಹೆಚ್ಚಳ), ಹಾಗೂ ಚೆನ್ನೈನಲ್ಲಿ 881 ರೂ. (147 ರೂ. ಹೆಚ್ಚಳ) ಆಗಿದೆ. ಬೆಂಗಳೂರಿನಲ್ಲಿ ಇಂಡೇನ್ ಸಿಲಿಂಡರ್ ಬೆಲೆ 850 ರೂಪಾಯಿ ಗಡಿ ದಾಟಿದೆ.