ನೆರೆ ಪೀಡಿತ ಮಹಿಳೆಯರಿಗಾಗಿ ಕೇಂದ್ರ ಸಚಿವರ ನೆರವು : ಶೆಶಿಕಲಾ ಜೊಲ್ಲೆ

ಬೆಂಗಳೂರು     ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿ ಮಾಡಿ ನೆರೆಪೀಡಿತ ಪ್ರದೇಶಗಳ ಮಹಿಳೆಯರಿಗಾಗಿ ವಿಶೇಷ ನೆರವು ಕೋರುತ್ತೇನೆ. ತಮಗೆ ಒಂದೆಡೆ ಖುಷಿಯಾಗಿದ್ದರೆ ಮತ್ತೊಂದೆಡೆ ದುಃಖವಿದೆ, ಜಿಲ್ಲೆಯ ಜನ ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಶೆಶಿಕಲಾ ಜೊಲ್ಲೆ ತಿಳಿಸಿದ್ದಾರೆ. 

ವಿಕಾಸಸೌಧದ  ಕೊಠಡಿ ಸಂಖ್ಯೆ 118 ರ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಬಸವಣ್ಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆರತಿ ಬೆಳಗಿ ಅಧಿಕೃತ ಕಚೇರಿ ಪ್ರವೇಶಿಸಿದರು.ಇದೇ ವೇಳೆ ಸಚಿವೆ ಜೊಲ್ಲೆಯವರ ಬೆಂಬಲಿಗರು, ಅಭಿಮಾನಿಗಳು ಹೂಗುಚ್ಚ ನೀಡಿ ಶುಭ ಹಾರೈಸಿದರು. 

ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಜವಾಬ್ದಾರಿಯನ್ನು   ತಮಗೆ ಪಕ್ಷದ  ಹೈಕಮಾಂಡ್ ಹಾಗು  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೀಡಿದ್ದಾರೆ. ತಾವು ಮತ್ತು ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಒಟ್ಟಾಗಿ ಚಿಕ್ಕೋಡಿ ವಿಭಾಗದಲ್ಲಿ ನೆರೆ ಸಂತ್ರಸ್ಥ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಮುಖ್ಯಮಂತ್ರಿ ಅವರಿಗೆ ವರದಿ ಸಲ್ಲಿಸಿದ್ದೇವೆ. ಮಹಿಳಾ ಕಲ್ಯಾಣ ಸಚಿವೆಯಾಗಿರುವ ಹಿನ್ನಲೆಯಲ್ಲಿ ಮಹಿಳೆಯರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇನೆ. 

ನಾಳೆಯಿಂದ ಮತ್ತೆ ನೆರೆ ಸಂತ್ರಸ್ಥ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವತ್ತ ಗಮನಹರಿಸುತ್ತೇನೆ ಎಂದು ಅವರು ತಿಳಿಸಿದರು. 

ರಾಜ್ಯದಲ್ಲಿ ಶೇಕಡಾ 60 ಮಹಿಳೆಯರು ಹಾಗು ವೃದ್ದರು,ವಿಶೇಷಚೇತನರಿದ್ದು ಅವರೆಲ್ಲರ ಹಿತ ರಕ್ಷಣೆಯ ಜವಾಬ್ದಾರಿ ತಮ್ಮ ಮೇಲಿದೆ.ನೆರೆ ಹಾವಳಿಯಿಂದ ಉತ್ತರ ಕರ್ನಾಟಕ ಪ್ರದೇಶ ಸಂಪೂರ್ಣವಾಗಿ ತತ್ತರಿಸಿದ್ದು,ಮಹಿಳೆಯರು ಹಾಗು ಮಕ್ಕಳು ವೃದ್ದರು ತೀವ್ರ ಸಂಕಷ್ಟದಲ್ಲಿದ್ದಾರೆ.

ಅವರಿಗೆ ನೆರವು ನೀಡುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದರು. 

ನೆರೆ ಹಾನಿಯಲ್ಲಿ ಮಹಿಳೆಯರು ಮಕ್ಕಳು,ವೃದ್ದರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನಲೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ವಿಶೇಷ ಪ್ಯಾಕೇಜ್ ಅಥವಾ ಪರಿಹಾರವನ್ನು ನೀಡುವಂತೆ ಕೋರುತ್ತೇವೆ ಎಂದು ಅವರು ತಿಳಿಸಿದರು.