ಪೊಷೆಫ್ ಸ್ಟ್ರೂಮ್, ಫೆ.4 - ಅಂಡರ್ 19 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ಸ್ ಪಂದ್ಯದಲ್ಲಿ ಭರವಸೆಯ ಆಟಗಾರ ಯಶಸ್ವಿ ಜಸ್ವಾಲ್ ಬಾರಿಸಿದ ಶತಕದ ನೆರವಿನಿಂದ ಟೀಮ್ ಇಂಡಿಯಾ 10 ವಿಕೆಟ್ ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ, ಮತ್ತೊಮ್ಮೆ ಫೈನಲ್ ಗೆ ಪ್ರವೇಶ ಪಡೆದಿದೆ.
ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿ 172 ರನ್ ಗಳಿಗೆ ಆಲೌಟ್ ಆಯಿತು. ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 35.2 ಓವರ್ ಗಳಲ್ಲಿ 176 ರನ್ ಬಾರಿಸಿ ಜಯ ಸಾಧಿಸಿತು.
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆದರೆ ಕಳಪೆ ಆರಂಭ ಪಡೆದ ಪರಿಣಾಮ 34 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಹುರೇರಾ (4) ಫಹಾದ್ ಮುನೀರ್ (0) ರನ್ ಕಲೆ ಹಾಕುವಲ್ಲಿ ವಿಫಲರಾದರು.
ಮೂರನೇ ವಿಕೆಟ್ ಗೆ ರೋಹಿಲ್ ನಜೀರ್ ಹಾಗೂ ಹೈದರ್ ಅಲಿ 62 ರನ್ ಗಳ ಜೊತೆಯಾಟದ ಕಾಣಿಕೆ ನೀಡಿದರು. ಹೈದರ್ ಅಲಿ 77 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ 56 ರನ್ ಬಾರಿಸಿದರು. ನಾಯಕ ರೋಹಿಲ್ ನಜೀರ್ 6 ಬೌಂಡರಿ ಸಹಾಯದಿಂದ 62 ರನ್ ಸಿಡಿಸಿದರು.
ಮಧ್ಯಮ ಕ್ರಮಾಂಕದ ಮೊಹಮ್ಮದ್ ಹ್ಯಾರಿಸ್ ಒಂದು ಬೌಂಡರಿ, ಒಂದು ಸಿಕ್ಸರ್ ಸಹಾಯದಿಂದ 21 ರನ್ ಬಾರಿಸಿದರು. ಉಳಿದ ಬ್ಯಾಟ್ಸ್ ಮನ್ ಗಳು ರನ್ ಕಲೆ ಹಾಕುವಲ್ಲಿ ಎಡವಿದರು. ಟೀಮ್ ಇಂಡಿಯಾದ ಪರ ಸುಶಾಂತ್ ಮಿಶ್ರಾ 3, ಕಾರ್ತಿಕ್ ತ್ಯಾಗಿ ಹಾಗೂ ರವಿ ಬಿಷ್ಣೋಯಿ ತಲಾ ಎರಡು ವಿಕೆಟ್ ಕಬಳಿಸಿದರು.
ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾದ ಆರಂಭಿಕರು ತಮ್ಮ ಜವಾಬ್ದಾರಿ ಅರಿತು ಆಡಿದರು. ಪಾಕ್ ರಣ ತಂತ್ರವನ್ನು ಬುಡಮೇಲು ಮಾಡಿದ ಟೀಮ್ ಇಂಡಿಯಾ ಆರಂಭಿಕರು ರನ್ ಹೊಳೆ ಹರಿಸಿದರು. ವೇಗದ ಹಾಗೂ ಸ್ಪಿನ್ ಬೌಲರ್ ಗಳ ಯೋಜನೆ ತಲೆ ಕೆಳಗಿ ಮಾಡಿದ ಯಶಸ್ವಿ ಜಸ್ವಾಲ್ ಹಾಗೂ ದಿವ್ಯಾಂಶು ಸಕ್ಸೆನಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ ವಿಕೆಟ್ ಬೀಳದಂತೆ ಕಾಯ್ದುಕೊಳ್ಳುವಲ್ಲಿ ಸಫಲವಾಯಿತು.
ಸ್ಟಾರ್ ಆಟಗಾರ ಯಶಸ್ವಿಯ ಜಸ್ವಾಲ್ ಮನಮೋಹಕ ಆಟದ ಪ್ರದರ್ಶನ ನೀಡಿದರು. 113 ಎಸೆತಗಳಲ್ಲಿ 8 ಬೌಂಡರಿ, 4 ಸಿಕ್ಸರ್ ಬಾರಿಸಿದ ಜೈಸ್ವಾಲ್ ಅಜೇಯ 105 ರನ್ ಬಾರಿಸಿದರು. ದಿವ್ಯಾಂಶು ಅಜೇಯ 59 ರನ್ ಸಿಡಿಸಿದರು. ಈ ಮೂಲಕ ಏಳನೇ ಬಾರಿ ಫೈನಲ್ ಗೆ ಪ್ರವೇಶ ಪಡೆಯಿತು.