ಅಂಡರ್ 19: ನಾಳೆಯಿಂದ ಭಾರತದ ವಿಶ್ವಕಪ್ ಅಭಿಯಾನ ಆರಂಭ

under 19 wordcup

ನವದೆಹಲಿ, ಜ.18- ಹಾಲಿ ಚಾಂಪಿಯನ್ ಮತ್ತು ನಾಲ್ಕು ಬಾರಿಯ ಚಾಂಪಿಯನ್ ಭಾರತೀಯ ಕ್ರಿಕೆಟ್ ತಂಡವು ಭಾನುವಾರ ಐಸಿಸಿ ಅಂಡರ್ -19 ವಿಶ್ವಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ತನ್ನ ಅಭಿಯಾನ ಪ್ರಾರಂಭಿಸಲಿದ್ದು, ಈ ಬಾರಿ ಐದನೇ ಬಾರಿಗೆ ಪ್ರಶಸ್ತಿ ಎತ್ತುವ ಅಭಿಯಾನಕ್ಕೆ ಚಾಲನೆ ನೀಡಲಿದೆ. 

ಐಸಿಸಿ ವಿಶ್ವಕಪ್‌ನ 13 ನೇ ಆವೃತ್ತಿಯಲ್ಲಿ ಭಾರತ ತಂಡವು ಪ್ರಶಸ್ತಿಗಾಗಿ ಪ್ರಬಲ ಸ್ಪರ್ಧಿ. ಭಾರತ ವಿಶ್ವಕಪ್‌ಗಾಗಿ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ ಮತ್ತು ಇಲ್ಲಿಗೆ ಬರುವ ಮೊದಲು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನ್ಯೂಜಿಲೆಂಡ್‌ ತಂಡವನ್ನು ಸೋಲಿಸುವ ಮೂಲಕ ನಾಲ್ಕು ದೇಶಗಳ ಪಂದ್ಯಾವಳಿಯನ್ನು ಗೆದ್ದುಕೊಂಡಿತು.

ಭಾರತೀಯ ಕಿರಿಯರ ತಂಡ ತನ್ನ ಅಭ್ಯಾಸ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆ ತಂಡವನ್ನು ಸೋಲಿಸಿತ್ತು. ಪ್ರತಿಭಾವಂತ ಯುವ ಆಟಗಾರರೊಂದಿಗೆ ಭಾರತ, ಭಾನುವಾರ ಶ್ರೀಲಂಕಾದ ಸವಾಲನ್ನು ಎದುರಿಸಲಿದೆ. 2018 ರಲ್ಲಿ ಆಸ್ಟ್ರೇಲಿಯಾವನ್ನು ಮಣಿಸುವ ಮೂಲಕ ಭಾರತ ನಾಲ್ಕನೇ ಬಾರಿಗೆ ಪಂದ್ಯಾವಳಿಯನ್ನು ಗೆದ್ದುಕೊಂಡಿತು. ಆಸ್ಟ್ರೇಲಿಯಾ ಮೂರು ಪ್ರಶಸ್ತಿಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನವು ಎರಡು ಬಾರಿ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಈ ಪ್ರಶಸ್ತಿ ಪಡೆದ ಇತರ ತಂಡಗಳಾಗಿವೆ.

ಐಸಿಸಿ ಅಂಡರ್ -19 ವಿಶ್ವಕಪ್‌ನಲ್ಲಿ ಇದುವರೆಗೆ ನಡೆದ 77 ಪಂದ್ಯಗಳಲ್ಲಿ 58 ಪಂದ್ಯಗಳನ್ನು ಭಾರತ ಗೆದ್ದಿದೆ ಮತ್ತು ಪಂದ್ಯಾವಳಿಯ ಪ್ರಬಲ ಮತ್ತು ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಆದರೆ ಬಾಂಗ್ಲಾದೇಶ, ಶ್ರೀಲಂಕಾ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನದಂತಹ ತಂಡಗಳು ಎಂದಿಗೂ ಪ್ರಶಸ್ತಿ ಗೆದ್ದಿಲ್ಲ. ಆದ್ದರಿಂದ ಭಾರತ ಶ್ರೀಲಂಕಾ ವಿರುದ್ಧ ಗೆಲುವಿನ ಆರಂಭ ಪಡೆಯುವ ಕನಸು ಕಾಣುತ್ತಿದೆ.

ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ನಾಯಕ ಪ್ರಿಯಮ್ ಗರ್ಗ್ ಅವರಲ್ಲದೆ, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ ಕೂಡ ತಂಡಕ್ಕೆ ಬ್ಯಾಟಿಂಗ್ ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಇತ್ತೀಚಿನ ಐಪಿಎಲ್ ಹರಾಜಿನಲ್ಲಿ, ಎಲ್ಲರ ಗಮನ ಸೆಳೆದಿದ್ದ ಯಶ್ವಿ ಜೈಸ್ವಾಲ್, 21 ಇನ್ನಿಂಗ್ಸ್‌ಗಳಲ್ಲಿ 58 ಸರಾಸರಿಯಲ್ಲಿ 986 ರನ್ ಗಳಿಸಿದ್ದಾರೆ. ಬೌಲರ್‌ಗಳಲ್ಲಿ ಸ್ಪಿನ್ನರ್ ರವಿ ಬಿಷ್ಣೋಯ್ ಮತ್ತು ವೇಗದ ಬೌಲರ್ ಕಾರ್ತಿಕ್ ತ್ಯಾಗಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಎದುರಾಳಿ ತಂಡ ಶ್ರೀಲಂಕಾ ನಾಯಕ ನಿಪುನ್ ಧನಂಜಯ್ ಪೆರೆರಾ ರನ್ ಗಳ ವಿಷಯದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ನವೋದ್ ಪರಣವಿತಾನ ಕೂಡ ದೊಡ್ಡ ಸ್ಕೋರರ್ ಆಗಿದ್ದು, ಇದು ಭಾರತ ತಂಡಕ್ಕೆ ಸವಾಲಾಗಿ ಪರಿಣಮಿಸುತ್ತದೆ.