ರಾಜ್ ಕೋಟ್, ಜ 13 : ಜಯದೇವ್ ಉನದ್ಕತ್ ( 28 ಕ್ಕೆ 3) ಅವರ ಮಾರಕ ದಾಳಿಗೆ ನಲುಗಿರುವ ಕರ್ನಾಟಕ ತಂಡ 2019/20ನೇ ಸಾಲಿನ ರಣಜಿ ಟ್ರೋಫಿ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ಸೌರಾಷ್ಟ್ರ ವಿರುದ್ಧಆರಂಭಿಕ ಆಘಾತಕ್ಕೆ ಒಳಗಾಗಿದೆ.ಇಲ್ಲಿನ, ಮಾಧವ್ ರಾವ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಒಂದು ವಿಕೆಟ್ ಕಳೆದುಕೊಂಡು 13 ರನ್ ಗಳಿಂದ ಸೋಮವಾರ ಬೆಳಗ್ಗೆ ಪ್ರಥಮ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡ ಮಧ್ಯಾಹ್ನದ ಭೋಜನ ವಿರಾಮದ ವೇಳೆಗೆ 41 ಓವರ್ ಗಳಿಗೆ ನಾಲ್ಕು ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದೆ. ಇನ್ನೂ, 498 ರನ್ ಹಿನ್ನಡೆಯಲ್ಲಿದೆ.ಇಂದು ಬೆಳಗ್ಗೆ ಕ್ರೀಸ್ ಗೆ ಇಳಿದ ಆರ್. ಸಮರ್ಥ್ ಹಾಗೂ ರೋಹನ್ ಕದಮ್ ಜೋಡಿ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಉಳಿಯಲಿಲ್ಲ. 60 ಎಸೆತಗಳಲ್ಲಿ 29 ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ರೋಹನ್ ಕದಮ್ ಅವರನ್ನು ಜಯದೇವ್ ಉನದ್ಕತ್ ಔಟ್ ಮಾಡಿದರು. ನಂತರ, ಕ್ರಿಸ್ ಗೆ ಬಂದ ಕೃಷ್ಣಮೂರ್ತಿ ಸಿದ್ಧಾರ್ಥ್ ಅವರನ್ನು ಉನದ್ಕತ್ ಶೂನ್ಯಕ್ಕೆ ಪೆವಿಲಿಯನ್ ಕಳುಹಿಸಿದರು. ಪವನ್ ದೇಶ್ ಪಾಂಡೆ ಕೂಡ 8 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.
ಮುಂಬೈ ವಿರುದ್ಧದ ಕಳೆದ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗಿದ್ದ ಆರ್. ಸಮರ್ಥ್ ಕ್ರೀಸ್ ನಲ್ಲಿದ್ದು ಮತ್ತೊಮ್ಮೆ ಭರವಸೆ ಮೂಡಿಸಿದ್ದಾರೆ. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತಿರುವ ಇವರು 115 ಎಸೆತಗಳಲ್ಲಿ ಮೂರು ಬೌಂಡರಿಯೊಂದಿಗೆ 35 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಮತ್ತೊಂದು ತುದಿಯಲ್ಲಿ ನಾಯಕ ಶ್ರೇಯಸ್ ಗೋಪಾಲ್ (9) ಇದ್ದಾರೆ. ಸೌರಾಷ್ಟ್ರ ಪರ ಜಯದೇವ್ ಉನದ್ಕತ್ ಮೂರು ವಿಕೆಟ್ ಪಡೆದರೆ, ಮಕ್ವಾನ ಒಂದು ವಿಕೆಟ್ ಪಡೆದಿದ್ದಾರೆ.ಸಂಕ್ಷಿಪ್ತ ಸ್ಕೋರ್(ಭೋಜನ ವಿರಾಮ)ಸೌರಾಷ್ಟ್ರಪ್ರಥಮ ಇನಿಂಗ್ಸ್: 581/7 (ಡಿ)ಕರ್ನಾಟಕ
ಪ್ರಥಮ ಇನಿಂಗ್ಸ್: 41 ಓವರ್ಗಳಿಗೆ 83/4 (ಆರ್. ಸಮರ್ಥ್ ಔಟಾಗದೆ 35, ರೋಹನ್ ಕದಮ್ 29; ಜಯದೇವ್ ಉನದ್ಕತ್ 28 ಕ್ಕೆ 3, ಕಮಲೇಶ್ಮಕ್ವಾನ 8 ಕ್ಕೆ 1)