ಬಾಗಲಕೋಟೆ, ಆ 22 ಶಾಸಕ ಉಮೇಶ್ ಕತ್ತಿ ಅವರ ಬಳಿ ಬೆಳಗ್ಗೆ ಮಾತನಾಡಿದ್ದೇನೆ. ಅವರು ಬಿಜೆಪಿ ಪಕ್ಷ ಬಿಡಲಿದ್ದರೆಂಬುದು ಕೇವಲ ಊಹಾಪೋಹವಷ್ಟೇ ಎಂದು ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್ ಕತ್ತಿ ನನ್ನ ಜೊತೆ ಮಾತನಾಡಿದ್ದಾರೆ. ಜಲಪ್ರಳಯದಲ್ಲಿ ಜನರು ಹೇಗೆ ಸಂತ್ರಸ್ತರಾಗಿದ್ದರೋ ಹಾಗೆಯೇ ಕಾಂಗ್ರೆಸ್ಸಿಗರು ರಾಜಕೀಯವಾಗಿ ನಿರಾಶ್ರಿತರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೀತಿ ಅನೇಕರು ರಾಜಕೀಯ ನಿರಾಶ್ರಿತರಾಗಿದ್ದಾರೆ. ರಾಜಕೀಯ ನಿರಾಶ್ರಿತರ ಕೇಂದ್ರಕ್ಕೆ ನೆರವು ಕೇಳುವ ಆಪೇಕ್ಷೆಯಿಂದ ಉಮೇಶ್ ಕತ್ತಿ ಅವರನ್ನು ಕರೆದಿರಬಹುದು. ಆದರೆ, ಉಮೇಶ ಕತ್ತಿ ಅವರು ಪಕ್ಷ ಬಿಡುವ ಮಾತೇ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಏನಾಗಿದೆ ಗೊತ್ತಾ? ರಾಜ್ಯದ ವಿಪಕ್ಷ ನಾಯಕ ಸ್ಥಾನವಷ್ಟೇ ಅಲ್ಲ, ರಾಷ್ಟ್ರೀಯ ಅಧ್ಯಕ್ಷ ಆಯ್ಕೆ ಮಾಡುವ ಶಕ್ತಿಯೇ ಇಲ್ಲ. ಕಾಂಗ್ರೆಸ್ ಎಲ್ಲಿದೆ ಅನ್ನುವ ಪರಿಸ್ಥಿತಿ ಇದೀಗ ಉಂಟಾಗಿದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಸರ್ಕಾರಕ್ಕೆ ಆಯಸ್ಸು ಕಡಿಮೆ ಎಂದಿದ್ದ ಮಾಜಿ ಸಚಿವ ಎಸ್ ಆರ್ ಪಾಟೀಲ್ ಅವರಿಗೆ ತಿರುಗೇಟು ನೀಡಿದ ಈಶ್ವರಪ್ಪ, ಕಾಂಗ್ರೆಸ್ನಲ್ಲಿ ಎಸ್ .ಆರ್ .ಪಾಟೀಲ ಪರಿಸ್ಥಿತಿ ಏನಾಗಿದೆ? ಎಂದು ಪ್ರಶ್ನಿಸಿದರು.
ಇದೀಗ ಕಾಂಗ್ರೆಸ್ನಲ್ಲಿ ವಿರೋಧ ಪಕ್ಷದ ನಾಯಕ ಇಲ್ಲ, ಮುಂದೆ ವಿಧಾನ ಪರಿಷತ್ಗೆ ಸೇರಿಸುತ್ತಾರೋ ಅಥವಾ ಬಿಡುತ್ತಾರೋ ಗೊತ್ತಿಲ್ಲ. ಕಾಂಗ್ರೆಸ್ ನಾಯಕರಿಗೆ ಟೀಕೆ ಮಾಡುವುದು ಒಂದೇ ಗೊತ್ತು, ಬಿಟ್ರೆ ಬೇರೇನೂ ಗೊತ್ತಿಲ್ಲ. ಅವರ ಕೈಯಲ್ಲಿ ಅಧಿಕಾರ ಇದ್ದಾಗ
18 ಶಾಸಕರು ಏಕೆ ಬಿಟ್ಟು ಹೋದರು ಎಂದು ಅವರು ಹೇಳಲಿ ನೋಡೋಣ ಎಂದು ಈಶ್ವರಪ್ಪ ಸವಾಲು ಹಾಕಿದರು.