ಉಮೇಶ್ ಕತ್ತಿಯೂ ಉಪ ಮುಖ್ಯಮಂತ್ರಿ ಆಗಬಹುದು : ಲಕ್ಷ್ಮಣ್ ಸವದಿ ಲೇವಡಿ

ಬೆಳಗಾವಿ,ಅ 13:   ಯಾರ ಹಣೆಬರಹ ಯಾರು ಬರೆಯುವುದಿಲ್ಲ. ಯಾರಿಗೆ ಯಾವ ಅವಕಾಶಗಳು ಸಿಗುತ್ತದೆ ಎಂದು ಹೇಳುವುದಕ್ಕಾಗುವುದಿಲ್ಲ.ಅದು ಹಣೆಬರಹದಲ್ಲಿ ಬರೆದಿರುತ್ತೆ ಎಂದು ಪರೋಕ್ಷವಾಗಿ ಉಮೇಶ್ ಕತ್ತಿಗೆ ಉಪಮುಖ್ಯ ಮಂತ್ರಿ ಲಕ್ಷ್ಮಣ್ ಸವದಿ ತಿರುಗೇಟು  ನೀಡಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಉಮೇಶ್ ಕತ್ತಿ ಅವರಿಗೆ ಮುಂದಿನ ದಿನಗಳಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ಸಿಗಬಹುದು.ಅದು ಅವರ ಹಣೆಯಲ್ಲಿ ಬರೆದಿರಬೇಕು ಎಂದು ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಸ್ಥಾನ ಸಿಗಲು ಅವರು ಎಲ್ಲವನ್ನು ಪಡೆದುಕೊಂಡು ಬಂದಿರಬೇಕೆಂದು ಲೇವಡಿ ಮಾಡಿದರು. 

  ಕಾಗವಾಡದ ಮಾಜಿ ಶಾಸಕ ರಾಜು ಕಾಗೆ ಕಾಡಾ ಮಂಡಲಿ ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿಲ್ಲ.ಬೇರೆ ನಿಗಮ ಮಂಡಳಿ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ. ರಾಜು ಕಾಗೆ ನನ್ನೊಂದಿಗೆ ದೂರವಾಣಿಯಲ್ಲಿ ಕರೆ ಮಾಡಿ ಮಾತನಾಡಿದ್ದಾರೆ. ಕಾಡಾ ಅಧ್ಯಕ್ಷ ಸ್ಥಾನದಿಂದ ರಾಜ್ಯಾದ್ಯಂತ ಕೆಲಸ ಮಾಡಲು ಸಾಧ್ಯವಿಲ್ಲ.ಹೀಗಾಗಿ ಬೇರೆ ನಿಗಮ ಮಂಡಳಿ ನೀಡುವಂತೆ ಕೇಳಿದ್ದಾರೆ ಎಂದ ಲಕ್ಷ್ಮಣ್ ಸವದಿ,ನಾನು ಅಶೋಕ್ ಪೂಜಾರಿ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.    

ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಉಪಚುನಾವಣೆ ಟಿಕೇಟ್ ವಿಷಯಕ್ಕೆ ಅಸಮಾಧಾ ನ ಬುಗಿಲೆದ್ದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಉಮೇಶ್ ಕತ್ತಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಉಮೇಶ್ ಕತ್ತಿಯವರಿಗೆ ಯಾರ ಮೇಲೆ ಮುನಿಸು ಇಲ್ಲ. ಅವರಿಗೆ ವೈಯಕ್ತಿಕ ಕೆಲಸಗಳಿರಬಹುದು ಎಂದು ಅವರು ಹೇಳಿದರು.