ಶೇಡಬಾಳ 26: ವಿಜ್ಞಾನ ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಪೂರ್ವಜರು ಪಂಚಾಂಗದಲ್ಲಿ ನಮೂದಿಸಿದಂತೆ ಗ್ರಹಣ ಹಿಡಿಯುವ ದಿನದಂದು ಒಂದು ತಾಮ್ರದ ತಟ್ಟೆಯಲ್ಲಿ ನೀರನ್ನು ತುಂಬಿ ಅದರಲ್ಲಿ ಒನಕೆಯನ್ನು ನಿಲ್ಲಿಸುತ್ತಿದ್ದರು. ಸೂರ್ಯ ಗ್ರಹಣ ಪ್ರಾರಂಭವಾದ ಘಳಿಗೆಯಿಂದ ನೇರವಾಗಿ ನಿಂತ ಒನಕೆಯು ಗ್ರಹಣ ಮುಗಿದ ನಂತರ ತನ್ನಷ್ಟಕ್ಕೇ ತಾನೆ ಉರುಳಿ ಬೀಳುತ್ತಿತ್ತು. ಆಗ ಪೂರ್ವಜರು ಸೂರ್ಯ ಗ್ರಹಣ ಪ್ರಾರಂಭ ಮತ್ತು ಅಂತ್ಯವನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದರು.
ಅದೇ ಪ್ರಕಾರ ಗುರುವಾರ ದಿ. 26 ರಂದು ಕಂಕಣ ಸೂರ್ಯ ಗ್ರಹಣ ಸಮಯದಲ್ಲಿ ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದಲ್ಲಿನ ಮಹಾದೇವ ಮಂದಿರದ ಓಣಿಯ ಜನರು ಇದೇ ಪ್ರಯೋಗವನ್ನು ಮಾಡಿ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವದರ ಜತೆಗೆ ಯುವ ಪೀಳಿಗೆ ಹಾಗೂ ಮುದ್ದು ಮಕ್ಕಳನ್ನು ಆಶ್ಚರ್ಯಚಕಿತಗೊಳಿಸಿದರು.
ಉಗಾರ ಬುದ್ರುಕ ಗ್ರಾಮದಲ್ಲಿನ ಮಹಾದೇವ ಮಂದಿರದ ಓಣಿಯ ಮಹಿಳೆಯರು ಮನೆಯ ಹೊರಾಂಗಣದಲ್ಲಿ ಒಂದು ತಾಮ್ರದ ತಟ್ಟೆಯಲ್ಲಿ ನೀರನ್ನು ತುಂಬಿ ಅದರಲ್ಲಿ ಒನಕೆಯನ್ನು ನಿಲ್ಲಿಸಿದ್ದರು. ಸೂರ್ಯ ಗ್ರಹಣ ಪ್ರಾರಂಭವಾದ ನಂತರ ನೇರವಾಗಿ ನಿಂತಿದ್ದ ಒನಕೆಯು ಗ್ರಹಣ ಮುಕ್ತಾಯವಾದ ಕೂಡಲೇ ತನ್ನಷ್ಟಕ್ಕೆ ತಾನೇ ಉರುಳಿ ಬಿತ್ತು. ಈ ರೀತಿ ಇಲ್ಲಿಯ ಜನರು ಗ್ರಹಣ ಪ್ರಾರಂಭ ಹಾಗೂ ಮುಕ್ತಾಯವನ್ನು ಅರಿತು ಗೊಂಡರು. ಇದೇ ಪ್ರಕಾರ ಗ್ರಾಮದಲ್ಲಿನ ಹಲವಾರು ಓಣಿಗಳಲ್ಲಿ ಇದೇ ಪ್ರಯೋಗವನ್ನು ಮಾಡಿದ್ದು ಸಾಮಾನ್ಯವಾಗಿತ್ತು.
ಈ ಸಮಯದಲ್ಲಿ ಸೇವಂತಿ ನಾವಿ, ಸಾವು ನಾವಿ, ಚಂಪಾ ಪರಮಾನಟ್ಟಿ, ಭಾರತಿ ನಾವಿ, ಸವಿತಾ ನಾವಿ, ಪುಷ್ಪಾ ನಾವಿ, ಸಂಗೀತಾ ಖುರ್ದ, ರಾಜಶ್ರೀ ನಾವಿ, ರೇಖಾ ನಾವಿ, ರಾಜು ನಾವಿ, ಸುಖದೇವ ನಾವಿ, ಶ್ರೇಯಸ್ಸ ನಾವಿ, ಸಹನಾ ಜೂಜಗಾಂವ, ಸಮ್ಮೇದ ಪರಮಾನಟ್ಟಿ, ಪವನ ಖುರ್ದ, ಪಾಶ್ರ್ವ ಖುರ್ದ, ಶ್ರೀಶೈಲ ನಾವಿ, ಅರನೌ ಅರಗೆ, ವೈಷ್ಣವಿ ನಾವಿ, ಓಂಕಾರ ನಾವಿ, ವಿಕಾಸ ನಾವಿ, ದಿವ್ಯಾ ನಾವಿ, ಮನಿಷಾ ನಾವಿ ಸೇರಿದಂತೆ ಅನೇಕರು ಇದ್ದರು.