ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಅಭಿಯಾನ

ಕಾರವಾರ 17: ಅಂಕೋಲಾ ತಾಲ್ಲೂಕಿನ ಬೆಳಂಬಾರ ಗ್ರಾಮ ಪಂಚಾಯತಿ ಕಚೇರಿ ಆವರಣದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಕೆಗಾಗಿ ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ಮಂಗಳವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್‌ನ ಜಿಲ್ಲಾ ಐಇಸಿ ಸಂಯೋಜಕ ಫಕ್ಕೀರ​‍್ಪ ತುಮ್ಮಣ್ಣನವರ , ಮಹಾತ್ಮ ಗಾಂಧಿ ನರೇಗಾ ಯೋಜನೆಯ ಸೌಲಭ್ಯಗಳನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಲಾಗುತ್ತಿದೆ. ಗ್ರಾಮೀಣ ಭಾಗದ ಜನರು, ರೈತರು ಗ್ರಾಪಂಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದರ ಜೊತೆಗೆ ಸ್ಮಾರ್ಟ್‌ ಫೋನ್‌ನಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನರೇಗಾ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡು ತಮಗೆ ಅಗತ್ಯವಿರುವ ಕೂಲಿ ಕೆಲಸ ಹಾಗೂ ಕಾಮಗಾರಿ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಗ್ರಾಪಂ ಅಧಿಕಾರಿಗಳು ಮನೆ-ಮನೆ ಭೇಟೀನೀಡಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಎಲ್ಲ ಸಾರ್ವಜನಿಕರು ಹಾಗೂ ನರೇಗಾ ಕೂಲಿಕಾರರು ನವೆಂಬರ್ 30 ರೊಳಗಾಗಿ ನರೇಗಾದಡಿ ಲಭ್ಯವಿರುವ ವಿವಿಧ ವೈಯಕ್ತಿಕ ಕಾಮಗಾರಿಗಳು ಮತ್ತು ಕೂಲಿ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ನರೇಗಾ ಯೋಜನೆಯ ಮಾರ್ಗಸೂಚಿಯಂತೆ ತೋಟಗಾರಿಕೆ, ಕೃಷಿ, ರೇಷ್ಮ, ಅರಣ್ಯ ಇಲಾಖೆಯಡಿ ಸಿಗುವ ಸೌಲಭ್ಯ ಪಡೆಯಲು ರೈತರು ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದರು.ಗ್ರಾಮ ಪಂಚಾಯತ್‌ನ ಅಧ್ಯಕ್ಷ ಜ್ಯೋತಿ ದಿಗಂಬರ ಖಾರ್ವಿ ಹಾಗೂ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ ಹಸ್ಮತ್ ಪರವಿನ ಖಾನ್ ಅಭಿಯಾನಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ದ್ವಿತಿಯ ದರ್ಜೆ ಲೆಕ್ಕ ಸಹಾಯಕ ಈಶ್ವರ ಹಳ್ಳೇರ, ತಾಂತ್ರಿಕ ಸಹಾಯಕ ಅಭಿಯಂತರ ಮಹೇಶ, ಕ್ಲರ್ಕ್‌ ಕಂ ಡಿಇಒ ಮಂಜುನಾಥ ಮಡಿವಾಳರ, ಸ್ವಚ್ಚತಾಗಾರ ವಿಶ್ವನಾಥ ನಾಯ್ಕ, ನೀರುಗಂಟಿ ನಾಗರತ್ನ ಖಾರ್ವಿ, ಗ್ರಂಥಪಾಲಕ ಸಿಂಧೂ ಆಗೇರ, ಬಿಲ್ ಕಲೆಕ್ಟರ್ ಮಂಜುನಾಥ ಗೌಡ, ವಿಆರ್‌ಡಬ್ಲ್ಯೂ ಬಿ.ಬಿ. ಗೌಡ ಸೇರಿದರು.