‘ಜಿಯೋ ಪ್ಲಾಟ್‌ಫಾರ್ಮ್ಸ್’ ನಲ್ಲಿ ಅಮೆರಿಕ ಮೂಲದ ವಿಸ್ಟಾ 11,367 ಕೋಟಿ ರೂ ಹೂಡಿಕೆ

ಮುಂಬೈ, ಮೇ 8,ಅಮೆರಿಕದ ‘ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್’ ಸಂಸ್ಥೆ ‘ಜಿಯೋ ಪ್ಲಾಟ್‌ಫಾರ್ಮ್ಸ್’ ನಲ್ಲಿ 11,367 ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ತಿಳಿಸಿವೆ. ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್  ಅನ್ನು 4.91 ಲಕ್ಷ ಕೋಟಿ ರೂ.ಗಳ ಈಕ್ವಿಟಿ ಮೌಲ್ಯದಲ್ಲಿ ಮತ್ತು 5.16 ಲಕ್ಷ ಕೋಟಿ ರೂ. ಉದ್ಯಮ ಮೌಲ್ಯದಲ್ಲಿರಿಸಲಿದೆ.

ಹೂಡಿಕೆಯ  ಮೂಲಕ ವಿಸ್ಟಾ, ಜಿಯೋ ಪ್ಲಾಟ್‌ಫಾರ್ಮ್ಸ್  ನಲ್ಲಿ ಶೇ 2.32ರಷ್ಟು ಈಕ್ವಟಿ ಪಾಲು ಹೊಂದಲಿದೆ.  ಈ ಮೂಲಕ ರಿಲಯೆನ್ಸ್ ಪ್ಲಾಟ್‍ಫಾರ್ಮ್ಸ್ ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಫೇಸ್‌ಬುಕ್‌ ನಂತರ ವಿಸ್ಟಾ, ಅತಿದೊಡ್ಡ ಹೂಡಿಕೆದಾರ ಸಂಸ್ಥೆ ಎನಿಸಿದೆ. ಜಿಯೋ ಪ್ಲಾಟ್‌ಫಾರ್ಮ್ಸ್ ಸದ್ಯ,ಪ್ರಮುಖ ತಂತ್ರಜ್ಞಾನ ಹೂಡಿಕೆದಾರರಿಂದ ಮೂರು ವಾರಗಳಲ್ಲಿ 60,596.37 ಕೋಟಿ ರೂ.ಕ್ರೋಢೀಕರಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ಭವಿಷ್ಯದ ತಂತ್ರಜ್ಞಾನ ಕಂಪನಿಯಾಗಿದೆ. ಜಿಯೋನ ಪ್ರಮುಖ ಡಿಜಿಟಲ್ ಆಪ್‍ಗಳು, ಡಿಜಿಟಲ್ ಪರಿಸರ ವ್ಯವಸ್ಥೆಗಳು ಮತ್ತು ಭಾರತದ ನಂಬರ್ ಒನ್ ಹೈಸ್ಪೀಡ್ ಸಂಪರ್ಕ ವೇದಿಕೆಯನ್ನು ಒಂದು ಸೂರಿನಡಿ ತರುವ ಮೂಲಕ ಜಿಯೋ ಪ್ಲಾಟ್‌ಫಾರ್ಮ್ಸ್  ಭಾರತಕ್ಕೆ ಡಿಜಿಟಲ್ ಸಮಾಜ ನಿರ್ಮಿಸುವ ಉದ್ದೇಶವನ್ನು ಹೊಂದಿದೆ.