ಯುಎಸ್ ಓಪನ್: ಎರಡನೇ ಸುತ್ತಿಗೆ ಬೋಪಣ್ಣ ಜೋಡಿ, ಪೇಸ್ ಜೋಡಿಗೆ ಸೋಲು

ನ್ಯೂಯಾರ್ಕ್, ಆ 31     ಭಾರತದ ರೋಹನ್ ಬೋಪಣ್ಣ ಹಾಗೂ ಕೆನಡಾದ ಡೆನಿಸ್ ಶಪೋವೊಲೊವ್ ಪುರುಷರ ಡಬಲ್ಸ್ ಜೋಡಿಯು ಮೊದಲನೇ ಸುತ್ತಿನಲ್ಲಿ ಗೆದ್ದು ಎರಡನೇ ಸುತ್ತಿಗೆ ಲಗ್ಗೆ ಇಟ್ಟಿದೆ. ಆದರೆ,  ಭಾರತದ ಲಿಯಾಂಡರ್ ಪೇಸ್ ಹಾಗೂ ಅರ್ಜೆಂಟೀನಾದ ಗಿಲ್ಲೆರ್ಮೊ ಡುರಾನ್ ಜೋಡಿಯು ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಮೊದಲ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ.   

ಯುಎಸ್ಟಿಎ ಬಿಲ್ಲಿ ಜೀನ್ ಕಿಂಗ್ ನ್ಯಾಷನಲ್ ಟೆನಿಸ್ ಸೆಂಟರ್ನಲ್ಲಿ ಶುಕ್ರವಾರ ನಡೆದ ಪುರಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಶಪೋವೊಲೊ ಜೋಡಿಯು ಫ್ರಾನ್ಸ್ನ  ಪಿಯರೆ-ಹ್ಯೂಸ್ ಹೆರ್ಬರ್ಟ್ ಮತ್ತು ನಿಕೋಲಸ್ ಮೆಹುತ್ ಜೋಡಿಯ ವಿರುದ್ಧ 6-3, 6-1  ಅಂತರದಲ್ಲಿ ನೇರ ಸೆಟ್ಗಳಿಂದ ಗೆದ್ದು ಯುಎಸ್ ಓಪನ್ ಎರಡನೇ ಸುತ್ತಿಗೆ ಪ್ರವೇಶ  ಮಾಡಿದೆ.  

ಇದಕ್ಕೂ ಮೊದಲು ನಡೆದ ಮತ್ತೊಂದು ಪುರುಷರ ಡಬಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ ಪೇಸ್ ಹಾಗೂ ಡುರಾನ್ ಜೋಡಿಯು ಸರ್ಬಿಯಾದ ಮಿಯೋಮಿರ್ ಕೆಕ್ಮನೋವಿಚ್ ಮತ್ತು ನಾರ್ವೆಯ ಕ್ಯಾಸ್ಪರ್ ರೂಡ್ ಜೋಡಿಯ ವಿರುದ್ಧ 7-5, 6-2 ಅಂತರದಲ್ಲಿ ಸೋತು ನಿರಾಸೆ ಅನುಭವಿಸಿತು. 

ಬೋಪಣ್ಣ ಹಾಗೂ ಶಪೋವೊಲೊ ಜೋಡಿಯು ಎರಡನೇ ಸುತ್ತಿನ ಪಂದ್ಯದಲ್ಲಿ ಮಾರ್ಕೊ ಎಂ ಸೆಚಿನಾಟೊ ಮತ್ತು ಆಂಡ್ರಿಯಾಸ್ ಎ ಸೆಪ್ಪಿ ಇಟಲಿ ಜೋಡಿಯ ವಿರುದ್ಧ ಸೆಣಸಲಿದೆ. ಈ ಜೋಡಿಯು ಸ್ಪೇನ್ನ ಪಿ. ಆಂಡುಜರ್ ಮತ್ತು ಎಫ್ ವಡರ್ಾಸ್ಕೊ ಜೋಡಿಯ ವಿರುದ್ಧ ಮೊದಲ ಸುತ್ತಿನಲ್ಲಿ 6-3, 7-6 (1) ಅಂತರದಲ್ಲಿ ಗೆದ್ದಿತ್ತು.