ನವದೆಹಲಿ, ನ.29- ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರೊಂದಿಗೆ ನಡೆದ ದ್ವಿಪಕ್ಷೀಯ ಮಾತುಕತೆಯ ಕೊನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ 50 ಮಿಲಿಯನ್ ಅಮೆರಿಕನ್ ಡಾಲರ್ ಸೇರಿದಂತೆ ಒಟ್ಟು 450 ಅಮೆರಿಕನ್ ಡಾಲರ್ ನೆರವನ್ನು ಶ್ರೀಲಂಕಾಕ್ಕೆ ಘೋಷಿಸಿದ್ದಾರೆ.
ಪರಸ್ಪರ ಭದ್ರತೆಗಾಗಿ ಮತ್ತು ಭಯೋತ್ಪಾದಕ ಭೀತಿಯ ವಿರುದ್ಧ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಲು ನಾನು ಅಧ್ಯಕ್ಷ ರಾಜಪಕ್ಸೆ ಅವರೊಂದಿಗೆ ವಿವರವಾದ ಮಾತುಕತೆ ನಡೆಸಿದ್ದೇನೆ. ಶ್ರೀಲಂಕಾದ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿ ಭಾರತದ ವಿವಿಧ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಮೋದಿ ಹೇಳಿದರು.
ಶಾಂತಿಯುತ ಮತ್ತು ಸಮೃದ್ಧವಾದ ಶ್ರೀಲಂಕಾವನ್ನು ಭಾರತ ಬಯಸುತ್ತದೆ. ಏಕೆಂದರೆ ಇದು ಇಡೀ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಶಾಂತಿಯನ್ನು ಖಾತರಿಪಡಿಸುತ್ತದೆ ಎಂದು ಮೋದಿ ಹೇಳಿದರು.
ಸಹಸ್ರಮಾನಗಳ ಮೂಲಕ ಪೋಷಿಸಲ್ಪಟ್ಟ ನಾಗರಿಕ ಸಂಬಂಧ .." ಎಂದು ಎಂಇಎ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅಧ್ಯಕ್ಷ ಗೋಟಬಯ ಅವರು ಮೋದಿಯವರ ಆಹ್ವಾನದ ಮೇರೆಗೆ ತಮ್ಮ ಮೊದಲ ವಿದೇಶ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದಾರೆ. ಇದು ಭಾರತ-ಶ್ರೀಲಂಕಾ ಸಂಬಂಧಗಳ ಶಕ್ತಿ ಮತ್ತು ಚೈತನ್ಯವನ್ನು ಪ್ರದರ್ಶಿಸುತ್ತದೆ.
ಮೀನುಗಾರರ ವಿಷಯಗಳು ಮತ್ತು ಶ್ರೀಲಂಕಾದ ತಮಿಳು ಸಮುದಾಯದ ಆಕಾಂಕ್ಷೆಗಳನ್ನು ಈಡೇರಿಸುವಂತಹ ವಿಷಯಗಳಿಗೆ ಮಾತುಕತೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಮೀನುಗಾರರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಮಾನವೀಯತೆಯು ಪ್ರಮುಖ ಅಂಶವಾಗಿರಬೇಕು ಎಂದು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ.
ದ್ವಿಪಕ್ಷೀಯ ಮಾತುಕತೆಯಲ್ಲಿ ಎರಡೂ ರಾಷ್ಟ್ರಗಳಿಗೆ ಸಂಬಂಧಿಸಿದ ಹಲವಾರು ಇತರ ವಿಷಯಗಳು ಪ್ರಮುಖವಾಗಿ ಚರ್ಚಿಸಲ್ಪಟ್ಟಿವೆ.
ಮೀನುಗಾರರ ಸಮಸ್ಯೆ ಮತ್ತು ಅವರ ಜೀವನೋಪಾಯವು ನಮ್ಮ ನಡುವಿನ ಮಾತುಕತೆಯಲ್ಲಿ ಚರ್ಚೆಗೆ ಬಂದಿವೆ. ಮೀನುಗಾರರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ರಚನಾತ್ಮಕ ಮತ್ತು ಮಾನವೀಯತೆಯು ಪ್ರಮುಖ ಅಂಶಗಳಾಗಿರಬೇಕು ಎಂಬ ವಿಶಾಲ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಪ್ರಧಾನಿ ರಾಜಪಕ್ಸೆ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಚರ್ಚೆಗಳು ಸೌಹಾರ್ದಯುತವಾಗಿದ್ದವು ಎಂದು ಶ್ರೀಲಂಕಾ ಅಧ್ಯಕ್ಷರು ಹೇಳಿದರು.
ಭಯೋತ್ಪಾದನೆ ನಿಗ್ರಹದಲ್ಲಿ ಭಾರತ ಯಾವಾಗಲೂ ಶ್ರೀಲಂಕಾಕ್ಕೆ ಸಹಾಯ ಮಾಡಿದೆ ಎಂದು ಹೇಳಿದ ಅವರು, ಈ ನಿಟ್ಟಿನಲ್ಲಿ ಸಹಕಾರವನ್ನು ಮುಂದುವರಿಸಲು ನಾವು ಎದುರು ನೋಡುತ್ತಿದ್ದೇವೆ ಎಂದರು.
ಮಾತುಕತೆಯ ನಂತರ ತಮ್ಮ ಮಾಧ್ಯಮ ಹೇಳಿಕೆಯಲ್ಲಿ, ಶ್ರೀಲಂಕಾವನ್ನು ತ್ವರಿತ ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯಲು ಭಾರತದ ಸಂಪೂರ್ಣ ಸಹಾಯದ ಬಗ್ಗೆ ರಾಜಪಕ್ಸೆ ಅವರಿಗೆ ಭರವಸೆ ನೀಡಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ತಮಿಳು ವಿಷಯದಲ್ಲಿ ಶ್ರೀಲಂಕಾ ಸರ್ಕಾರವು ಸಮನ್ವಯತೆಯಿಂದ ಕೆಲಸ ಮಾಡುತ್ತದೆ ಮತ್ತು ತಮಿಳು ಸಮುದಾಯದ ಆಕಾಂಕ್ಷೆಗಳನ್ನು ಈಡೇರಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಮೋದಿ ಹೇಳಿದರು.
ನಿಮಗೆ ದೊರೆತ ಜನಾದೇಶವು ಪ್ರಬಲ ಮತ್ತು ಸಮೃದ್ಧ ಶ್ರೀಲಂಕಾದ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ. ಈ ವಿಷಯದಲ್ಲಿ ಭಾರತದ ಶುಭಾಶಯಗಳು ಮತ್ತು ಸಹಕಾರವು ಯಾವಾಗಲೂ ಶ್ರೀಲಂಕಾದೊಂದಿಗೆ ಇರುತ್ತದೆ ಎಂದು ಪ್ರಧಾನಿ ಹೇಳಿದರು.
ರಾಷ್ಟ್ರಪತಿ ಭವನದಲ್ಲಿ ವಿಧ್ಯುಕ್ತ ಸ್ವಾಗತದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಲಂಕಾ ಅಧ್ಯಕ್ಷ ರಾಜಪಕ್ಸೆ, ಭಾರತ ಮತ್ತು ಶ್ರೀಲಂಕಾ ಎರಡೂ ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಒಟ್ಟಾಗಿ ಕೆಲಸ ಮಾಡಬೇಕಾಗಿದೆ ಎಂದರು.
"ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧವನ್ನು ಅತ್ಯಂತ ಉನ್ನತ ಮಟ್ಟಕ್ಕೆ ತರಲು ನಾನು ಬಯಸುತ್ತೇನೆ. ಐತಿಹಾಸಿಕವಾಗಿ ಮತ್ತು ರಾಜಕೀಯವಾಗಿ ನಮಗೆ ದೀರ್ಘಕಾಲದ ಸಂಬಂಧವಿದೆ" ಎಂದು ರಾಜಪಕ್ಸೆ ಹೇಳಿದರು.