ನವದೆಹಲಿ 29: ಕಾರು ಅಪಘಾತದಲ್ಲಿ ಉನ್ನಾವ್ ಅತ್ಯಾಚಾರ ಸಂತ್ರಸ್ಥೆ ಗಂಭೀರವಾಗಿ ಗಾಯಗೊಂಡಿದ್ದು ಅವರ ಕುಟುಂಬ ಸದಸ್ಯರು ಮೃತಪಟ್ಟಿರುವ ಘಟನೆಯ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಆದಿತ್ಯನಾಥ್ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ನಾಗರಿಕರ ಪ್ರಾಣ ಕಾಪಾಡುವ ಬಗ್ಗೆ ಸರಕಾರಕ್ಕೆ ಯಾವುದೇ ನೈತಿಕತೆ ಇಲ್ಲವೇ ಅಥವಾ ಅದು ಅದರ ಕಾರ್ಯಸೂಚಿಯಲ್ಲಿ ಇಲ್ಲವೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಸಂತ್ರಸ್ಥೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದರೆ, ಆರೋಪಿ ಸೆಂಗಾರ್ ಬಿಜೆಪಿ ಶಾಸಕರಾಗಿ ಮುಂದುವರಿಯುತ್ತಾರೆ; ಭಯವಿಲ್ಲದ ಯುಪಿ ಅಭಿಯಾನ ನಡೆಸಲು ರಾಜ್ಯ ಸರ್ಕಾರಕ್ಕೆ ಧೈರ್ಯವಿದೆಯೇ? ಎಂದು ಪ್ರಿಯಾಂಕಾ ಅವರು ಸರಣಿ ಟ್ವೀಟ್ ಗಳಲ್ಲಿ ಆರೋಪಿಸಿದ್ದಾರೆ. ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಅತ್ಯಾಚಾರ ಎಸಗಿದ ಆರೋಪ ಹೊರಿಸಿರುವ ಬಾಲಕಿ ಹೋಗುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಗಂಭೀರ ಗಾಯಗೊಂಡಿದ್ದು ಅವರ ಕುಟುಂಬದ ಇತರೆ ಸದಸ್ಯರು ಸಾವನ್ನಪ್ಪಿದ್ದಾರೆ.
ಬಿಜೆಪಿ ಶಾಸಕರಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯ ತಂದೆ ದೂರು ಕೊಟ್ಟರೆ ಅವರು ಪೊಲೀಸ್ ಕಸ್ಟಡಿಯಲ್ಲೇ ಸಾಯುತ್ತಾರೆ. ಕಳೆದ ವರ್ಷ ಪ್ರಮುಖ ಸಾಕ್ಷಿಯೊಬ್ಬರು ಇದೇ ರೀತಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈಗ ಸಾಕ್ಷಿಯಾಗಿದ್ದ ಆಕೆಯ ಚಿಕ್ಕಮ್ಮನನ್ನು ಕೊಲ್ಲಲಾಗಿದೆ ಮತ್ತು ಅಪಘಾತದಲ್ಲಿ ಆಕೆಯ ವಕೀಲರೂ ಗಾಯಗೊಂಡಿದ್ದಾರೆ ಎಂದು ಪ್ರಿಯಾಂಕಾ ಘಟನೆಯನ್ನು ಎಳೆಎಳೆಯಾಗಿ ಬಿಡಿಸಿ, ನಾಗರಿಕರ ಪ್ರಾಣ ಕಾಪಾಡುವ ಬಗ್ಗೆ ಸರಕಾರಕ್ಕೆ ಯಾವುದೇ ನೈತಿಕತೆ ಇಲ್ಲವೇ? ಅಥವಾ ಅದು ತನ್ನ ಕಾರ್ಯಸೂಚಿಯಲ್ಲಿ ಇಲ್ಲವೇ ? ಎಂದು ಪ್ರಶ್ನೆ ಮಾಡಿದ್ದಾರೆ. ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಭಾರತೀಯ ಮಹಿಳೆಯರಿಗಾಗಿ "ಬೇಟಿ ಬಚಾವೊ-ಬೇಟಿ ಪಡಾವೋ" ಎಂಬ ಹೊಸ ಶೈಕ್ಷಣಿಕ ಸರಣಿಯನ್ನು ಆರಂಭಿಸಿದ್ದು, ಅದರಲ್ಲಿ ಬಿಜೆಪಿ ಶಾಸಕರೊಬ್ಬರು ನಿಮ್ಮ ಮೇಲೆ ಅತ್ಯಾಚಾರ ಎಸಗಿದ್ದರೆ ಪ್ರಶ್ನೆಗಳನ್ನು ಕೇಳಬೇಡಿ" ಎಂದಿದೆ ಎಂದು ವ್ಯಂಗವಾಡಿದ್ದಾರೆ. 2017 ರಲ್ಲಿ ನಡೆದ ಅತ್ಯಾಚಾರದ ಆರೋಪದ ಮೇಲೆ ಶಾಸಕ ಸೆಂಗಾರ್ ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ. ಕಾರಿಗೆ ಡಿಕ್ಕಿ ಹೊಡೆದ ಲಾರಿಯ ನಂಬರ್ ಪ್ಲೇಟ್ ಮಸುಕಾಗಿದ್ದು ಈ ಅಪಘಾತವನ್ನು ಶಾಸಕರ ಕಡೆಯವರೇ ಮಾಡಿಸಿದ್ದಾರೆ ಎಂದು ಸಂತ್ರಸ್ಥೆಯ ಕುಟುಂಬ ಆರೋಪಿಸಿದೆ.