ನಾಳೆಯಿಂದ ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ಯುಎಫ್‍ಬಿಯು ಕರೆ: ಬ್ಯಾಂಕಿಂಗ್ ಕಾರ್ಯಾಚರಣೆ ಮೇಲೆ ಪರಿಣಾಮ ಸಾಧ್ಯತೆ

ಹೈದರಾಬಾದ್ / ಮುಂಬೈ, ಜ 30 :    ಬ್ಯಾಂಕ್ ಕಾರ್ಮಿಕರು ಮತ್ತು ಅಧಿಕಾರಿಗಳ 9 ಒಕ್ಕೂಟಗಳ ವೇದಿಕೆಯಾಗಿರುವ ಬ್ಯಾಂಕ್ ಕಾರ್ಮಿಕ ಒಕ್ಕೂಟಗಳ ಸಂಯುಕ್ತ ಒಕ್ಕೂಟ(ಯುಎಫ್‍ಬಿಯು) ಶುಕ್ರವಾರದಿಂದ ಎರಡು ದಿನಗಳ  ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಿರುವುದರಿಂದ ದೇಶಾದ್ಯಂತ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. 

ಮುಂಬೈನಲ್ಲಿ ಗುರುವಾರ ಭಾರತೀಯ ಬ್ಯಾಂಕ್‍ಗಳ ಸಂಘ (ಐಬಿಎ) ಮತ್ತು ಯುಎಫ್‍ಬಿಯು ನಡುವೆ ನಡೆದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಬ್ಯಾಂಕ್ ಮುಷ್ಕರ ನಡೆಸಲು ಯುಎಫ್‍ಬಿಯು ನಿರ್ಧರಿಸಿದೆ. 

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ)ದ ಪ್ರಧಾನ ಕಾರ್ಯದರ್ಶಿ ವೆಂಕಟಾಚಲಂ ಯುಎನ್‍ಐನೊಂದಿಗೆ ಮಾತನಾಡಿ, ಯುಎಫ್‍ಬಿಯು ಪ್ರತಿನಿಧಿಗಳು ಮತ್ತು ಐಬಿಎ ವೇತನ ಸಂದಾನ ಸಮಿತಿ ಅಧ್ಯಕ್ಷ ರಾಜ್‍ಕಿರಾನ್ ರೈ ನಡುವೆ ನಡೆದ ಮಾತುಕತೆಯಲ್ಲಿ ಯಾವುದೇ ಸಕಾರಾತ್ಮಕ ಫಲಿತಾಂಶ ದೊರೆತಿಲ್ಲ ಎಂದು ಹೇಳಿದ್ದಾರೆ. 

ಇದಕ್ಕೂ ಮುನ್ನ, ಜ 27 ರಂದು ಕೇಂದ್ರ ಕಾರ್ಮಿಕ ಸಚಿವಾಲಯದ ಮುಖ್ಯ ಕಾರ್ಮಿಕ ಆಯುಕ್ತ ರಾಜನ್ ವರ್ಮಾ ಅವರು ನವದೆಹಲಿಯ ತಮ್ಮ ಕಚೇರಿಯಲ್ಲಿ ಯುಎಫ್‍ಬಿಯು ಪ್ರತಿನಿಧಿಗಳೊಂದಿಗೆ ಕಾರ್ಮಿಕರ ವೇತನ ಪರಿಷ್ಕರಣೆ ಮತು ಇತರ ಬೇಡಿಕೆಗಳ ಕುರಿತು ನಡೆದ ನಡೆಸಿದ ಸಂಧಾನ ಸಭೆಯಲ್ಲಿ ಯಾವುದೇ ಸಕಾರಾತ್ಮಕ ಫಲಿತಾಂಶ ಕಂಡುಬಂದಿರಲಿಲ್ಲ. 

ಶೇ 20ರಷ್ಟು ವೇತನ ಹೆಚ್ಚಳ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗಾಗಿ ಕರೆ ನೀಡಲಾಗಿರುವ ಎರಡು ದಿನಗಳ ಮುಷ್ಕರದಲ್ಲಿ ಸುಮಾರು 10 ಲಕ್ಷ ನೌಕರರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಎಐಬಿಇಎ, ಎಐಬಿಒಸಿ, ಎನ್‍ಸಿಬಿಇ, ಎಐಬಿಒಎ, ಬಿಇಎಫ್‍ಐ, ಐಎನ್‍ಬಿಇಎಫ್, ಐಎನ್‍ಬಿಒಸಿ, ಎನ್‍ಒಬಿಡಬ್ಲ್ಯೂ ಮತ್ತು ಎನ್ ಒಬಿಒ ಮುಷ್ಕರದಲ್ಲಿ ಭಾಗವಹಿಸುತ್ತಿರುವ ಒಂಬತ್ತು ಬ್ಯಾಂಕ್ ಒಕ್ಕೂಟಗಳಾಗಿವೆ.

ಬರುವ ಮಾರ್ಚ್ 11 ರಿಂದ ದೇಶಾದ್ಯಂತ ಮೂರು ದಿನಗಳ ಮುಷ್ಕರ ಹಾಗೂ ಏಪ್ರಿಲ್ 1 ರಿಂದ ಅನಿರ್ದಿಷ್ಟ ಮುಷ್ಕರ ನಡೆಸಲು ಸಹ ಯುಎಫ್‍ಬಿಯು ನಿರ್ಧರಿಸಿದೆ.