ಎರಡು ವರ್ಷಗಳ ಬಳಿಕ ಸಿಡಿಸಿದ ಶತಕದ ಬಗ್ಗೆ ಭಾವುಕರಾದ ಅಜಿಂಕ್ಯಾ ರಹಾನೆ

ಕಿಂಗ್ಸ್ಸ್ಟನ್ (ಜಮೈಕಾ), ಆ 30       ಎರಡು ವರ್ಷಗಳ ಬಳಿಕ ಪಂದ್ಯದ ಗೆಲುವಿನ ಶತಕ ಸಿಡಿಸಿದ್ದರಿಂದ ಸ್ವಲ್ಪ ಭಾವುಕನಾಗಿದ್ದೆ ಎಂದು ಭಾರತ ತಂಡದ ಉಪ ನಾಯಕ ಅಜಿಂಕ್ಯಾ ರಹಾನೆ ಬಹಿರಂಗ ಪಡಿಸಿದ್ದಾರೆ.  ವೆಸ್ಟ್ ಇಂಡೀಸ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ಪ್ರಥಮ ಇನಿಂಗ್ಸ್ನಲ್ಲಿ 81 ಮತ್ತು ದ್ವಿತೀಯ ಇನಿಂಗ್ಸ್ನಲ್ಲಿ 102 ರನ್ ಸಿಡಿಸಿದ್ದರು. ಅಂತಿಮವಾಗಿ ಭಾರತ 381 ರನ್ಗಳಿಂದ ಭರ್ಜರಿ ಜಯ ಸಾಧಿಸಿತ್ತು.  ಇಂದು ಸಬೀನಾ ಪಾಕರ್್ನಲ್ಲಿ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದ ಅಂಗವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಜಿಂಕ್ಯಾ ರಹಾನೆ," ಮೊದಲ ಪಂದ್ಯದ ಬಳಿಕ ಸ್ವಲ್ಪ ಭಾವುಕನಾಗಿದ್ದೆ ಎಂದು ಹೇಳಿದ್ದಾರೆ.  " ನನಗೆ ಅನಿಸಿದ ಹಾಗೆ ನನ್ನ 10ನೇ ಶತಕ ವಿಶೇಷವಾದದ್ದು. ಶತಕ ಸಿಡಿಸಿದ ಬಳಿಕ ನನಗೆ ಸಂಭ್ರಮ ಪಡಬೇಕೆಂದು ಎನಿಸಲೇ ಇಲ್ಲ. 10ನೇ ಶತಕ ಸಿಡಿಸಲು ಎರಡು ವರ್ಷ ತೆಗೆದುಕೊಂಡಿದ್ದೇನೆ. ಹಾಗಾಗಿ, ನನಗೆ ಗೊತ್ತಿಲ್ಲದೆ ಭಾವುಕನಾದೆ" ಎಂದು ಹೇಳಿದರು.  "ಪೂರ್ವ ತಯಾರಿ ನಡೆಸಿದ ಬಳಿಕ ಪ್ರತಿಯೊಂದು ಸರಣಿ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಕಳೆದ ಎರಡು ವರ್ಷಗಳಿಂದ ಇದನ್ನು ಪಾಲಿಸುತ್ತಿದ್ದೇನೆ. ಹಾಗಾಗಿ, ಈ ಶತಕ ವಿಶೇಷವಾದದ್ದು" ಎಂದು ಹೇಳಿದ್ದಾರೆ.  ಅಂಟಿಗುವಾ ಮೊದಲ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಭಾರತ 25 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕ್ರೀಸ್ಗೆ ಇಳಿದ ರಹಾನೆ ದೀರ್ಘ ಕಾಲ ಕ್ರೀಸ್ನಲ್ಲಿ ಉಳಿದು ತಂಡದ ಮೊತ್ತ ಹೆಚ್ಚಿಸುವತ್ತ ಗಮನ ಹರಿಸಿದ್ದರು. ವೈಯಕ್ತಿಕ ಮೈಲಿಗಲ್ಲಿಗಿಂತ ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವುದು ಅನಿವಾರ್ಯ ಎನಿಸಿತ್ತು ಎಂದು ಮೊದಲ ಪಂದ್ಯದ ಬಳಿಕ ರಹಾನೆ ಹೇಳಿಕೊಂಡಿದ್ದರು.  " ಪ್ರಥಮ ಇನಿಂಗ್ಸ್ನಲ್ಲಿ ವೆಸ್ಟ್ ಇಂಡೀಸ್ ಬೌಲರ್ಗಳು ಅತ್ಯುತ್ತಮ ದಾಳಿ ನಡೆಸಿದ್ದರು. ಈ ವೇಳೆ ಬಹುಬೇಗ ಭಾರತದ ಪ್ರಮುಖ ಮೂರು ವಿಕೆಟ್ಗಳನ್ನು ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ಈ ವೇಳೆ ತಂಡವನ್ನು ಮೇಲೆತ್ತಲು ನನಗೆ ಉತ್ತಮ ಅವಕಾಶ ಸಿಕ್ಕಿತ್ತು. ಇದನ್ನು ಸಂಪೂರ್ಣವಾಗಿ ಸದುಪಯೋಗ ಪಡಿಸಿಕೊಂಡೆ. ವೈಯಕ್ತಿಕ ಮೈಲಿಗಲ್ಲಿಗಿಂತ ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆಯಾಗುವುದು ನನ್ನ ಗುರಿಯಾಗಿತ್ತು ಎಂದು ರಹಾನೆ ಹೇಳಿದ್ದಾರೆ.  ಇದು ವೈಯಕ್ತಿಕವಾಗಿ ವಿಶೇಷವಾಗಿದೆ. ಕ್ಲಿಷ್ಟ ಸನ್ನಿವೇಶದಲ್ಲಿದ್ದ ತಂಡವನ್ನು ದ್ವಿತೀಯ ಇನಿಂಗ್ಸ್ ಮುಕ್ತಾಯದ ವೇಳೆಗೆ ಬಲ ಗೊಳಿಸಲಾಯಿತು. ದ್ವಿತೀಯ ಇನಿಂಗ್ಸ್ನಲ್ಲಿ ವಿರಾಟ್ ಅವರ ಜತೆಗೂಡಿ 106 ರನ್ ಜತೆಯಾಟವಾಡಿದ್ದು ನಿರ್ಣಾಯಕವಾಗಿತ್ತು. ಈ ಜತೆಯಾಟ ಮೂಡಿಬಂದ ಬಳಿಕ ಒತ್ತಡ ಸಂಪೂರ್ಣ ಕಡಿಮೆಯಾಗಿತ್ತು. ಜತೆಗೆ, ಎರಡು ವರ್ಷಗಳ ಬಳಿಕ ಶತಕ ಸಿಡಿಸಿದ್ದು ವಿಶೇಷ ಎನಿಸಿತು  ಎಂದು ಹೇಳಿದರು.  ದ್ವಿತೀಯ ಇನಿಂಗ್ಸ್ನಲ್ಲಿ 93 ರನ್ ಗಳಿಸಿದ ಹನುಮ ವಿಹಾರಿ ಅವರನ್ನು ಈ ವೇಳೆ ರಹಾನೆ ಶ್ಲಾಘಿಸಿದರು. " ಭಾರತ (ಎ) ಪರ ಹನುಮ ವಿಹಾರಿ ಉತ್ತಮ ಸಾಧನೆ ಮಾಡಿದ್ದಾರೆ. ಜತೆಗೆ ದೇಶೀಯ ಕ್ರಿಕೆಟ್ನಲ್ಲೂ ಪಾರಮ್ಯ ಮೆರೆದಿದ್ದಾರೆ. ದೇಶೀಯ ಕ್ರಿಕೆಟ್ನಂತೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಅದೇ ಸ್ಥಿರತೆ ಉಳಿಸಿಕೊಂಡಿದ್ದಾರೆ ಎಂದು ಉಪ ನಾಯಕ ಹನುಮ ವಿಹಾರಿ ಬೆನ್ನು ತಟ್ಟಿದ್ದಾರೆ.