ನವದೆಹಲಿ 3: ರೈಲ್ವೆ ಇಲಾಖೆಯ ಉತ್ಪಾದನಾ ಘಟಕಗಳ ಕಂಪನೀಕರಣ ಹಾಗೂ ಖಾಸಗೀಕರಣದ ವಿಚಾರದಲ್ಲಿ, ಕಾಂಗ್ರೆಸ್ ದ್ವಿಮುಖ ಧೋರಣೆ ತೋರುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಅಧೀರ್ ರಂಜನ್ ಚೌಧರಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಗೋಯಲ್, 'ರೈಲ್ವೆಯನ್ನು ಖಾಸಗೀಕರಣಗೊಳಿಸಬೇಕೆಂದು ಕಾಂಗ್ರೆಸ್ ಯತ್ನಿಸುತ್ತಿದೆ, ಆದರೆ ನಮ್ಮದು ಸಾಂಸ್ಥಿ ಕೀಕರಣದ ಪ್ರಯತ್ನವಾಗಿದೆ' ಎಂದರು ರೈಲ್ವೆ ಇಲಾಖೆಯು 7 ಉತ್ಪಾದನಾ ಘಟಕಗಳನ್ನು ಸಾಂಸ್ಥಿಕೀಕರಣಗೊಳಿಸಲು ಯತ್ನಿಸುತ್ತಿದೆ.
ಇದು ಗಂಭೀರ ವಿಚಾರ ಎಂದ ಅಧೀರ್ ಚೌಧರಿಯವರಿಗೆ ಜವಾಬು ನೀಡಿದ ಗೋಯಲ್, ಯುಪಿಎ ಅವಧಿಯ ವಿತ್ತ ಸಚಿವರು, ಹೂಡಿಕೆ ಮತ್ತು ಖಾಸಗೀಕರಣವು ಉಪಯುಕ್ತ ಆಥರ್ಿಕ ಸಾಧನವೆಂದಿದ್ದರು ಎಂದು ತಿಳಿಸಿದರು. ಯುಪಿಎ ಮುಖ್ಯಸ್ಥೆ ಹಾಗೂ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂದಿಯವರು ಮಂಗಳವಾರ, ಖಾಸಗಿ ವಲಯದ, ಅದರಲ್ಲೂ ವಿಶೇಷವಾಗಿ ರೈಲ್ವೆ ಇಲಾಖೆ ಅಧೀನದ ಘಟಕಗಳ ಖಾಸಗೀಕರಣ ಮತ್ತು ಕಂಪನೀಕರಣ ಪ್ರಕ್ರಿಯೆಯನ್ನು ವಿರೋಧಿಸಿದ್ದರು.
"ರಾಯ್ ಬರೇಲಿಯ ಆಧುನಿಕ ಕೋಚ್ ಕಾರ್ಖಾನೆ ಸೇರಿದಂತೆ 6 ರೈಲ್ವೆ ಘಟಕಗಳನ್ನು ಕಂಪನೀಕರಣಗೊಳಿಸುವ ಮಾತು ಕೇಳಿಬರುತ್ತಿದೆ. ಇದು ಖಾಸಗೀಕರಣದ ಆರಂಭ" ಎಂದು ಸೋನಿಯಾ ಗಾಂಧಿ ಲೋಕಸಭೆಯ ಶೂನ್ಯ ಅವಧಿಯಲ್ಲಿ ಪ್ರಸ್ತಾಪಿಸಿದ್ದರು. ಏತನ್ಮಧ್ಯೆ ಸುದ್ದಿಗಾರರ ಜೊತೆ ಪ್ರತ್ಯೇಕವಾಗಿ ಮಾತನಾಡಿದ ಪಿಯೂಷ್ ಗೋಯಲ್, ರೈಲ್ವೆಯ ಮುದ್ರಣಾಲಯ ಮುಚ್ಚುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಇಡೀ ಜಗತ್ತು ಡಿಜಿಟಲೀಕರಣದತ್ತ ಮುನ್ನುಗ್ಗುತ್ತಿದೆ. ಟಿಕೆಟ್ ಬೆಲೆಗಿಂತ ಹೆಚ್ಚಾಗಿ ಮುದ್ರಣದ ಬೆಲೆಯೇ ಹೆಚ್ಚಾಗಿರುತ್ತದೆ. ಆದ್ದರಿಂದ ಮುದ್ರಣಾಲಯ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಮುದ್ರಣಾಲಯದ ಉದ್ಯೋಗಿಗಳಿಗೆ ಯಾವುದೇ ತೊಂದರೆಯಾಗದು, ಅವರಿಗೆ ರೈಲ್ವೆಯ ಬೇರೆ ವಿಭಾಗಗಳಲ್ಲಿ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದರು.