ಎರಡು ಚಿರತೆಗಳು ಪ್ರತ್ಯಕ್ಷ : ಆತಂಕಗೊಂಡ ಗ್ರಾಮಸ್ಥರು : ಚಿರತೆ ಸೆರೆಗೆ ಒತ್ತಾಯ
ಕಂಪ್ಲಿ 16: ತಾಲೂಕಿನ ನಂ.10 ಮುದ್ದಾಪುರ ಗ್ರಾ.ಪಂ.ವ್ಯಾಪ್ತಿಯ ಕಣವಿ ತಿಮ್ಮಲಾಪುರ ಗುಡ್ಡದಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿದ್ದು, ಹೊಸಪೇಟೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳು ಸಿಬ್ಬಂದಿಗಳು ಭೇಟಿ ನೀಡಿ, ಪರೀಶೀಲನೆ ನಡೆಸಿದ್ದಾರೆ. ಗ್ರಾಮದ ಕಮ್ಮಾರ ಗುಡ್ಡಕ್ಕೆ ಹೊಸಪೇಟೆ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ವಿ ಗೌಡ, ಗ್ರಾಮದ ಮುಖ್ಯ ರಸ್ತೆಯ ಹತ್ತಿರ ನಾಯಿಯನ್ನು ಹಿಡಿಯಲು ಚಿರತೆ ಪ್ರಯತ್ನಿಸಿದೆ. ಜನರು ಗಲಾಟೆ ಮಾಡಿದ್ದರಿಂದ ಚಿರತೆ ಗುಡ್ಡದ ಕಡೆಗೆ ಓಡಿ ಹೋಗಿದೆ. ಎರಡು ಚಿರತೆಗಳು ಪ್ರತಿ ದಿನ ಕಮ್ಮಾರ ಗುಡ್ಡದ ಕೆಳಗೆ ಪ್ರತ್ಯಕ್ಷವಾಗುತ್ತಿವೆ. ಇದರಿಂದಾಗಿ ರೈತರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ತೆರಳಲು ತೀವ್ರವಾದ ತೊಂದರೆಯಾಗಿದೆ. ರೈತರು, ಸಾರ್ವಜನಿಕರು ಆತಂಕಗೊಂಡಿದ್ದು, ಈ ಭಾಗದಲ್ಲಿ ಅರಣ್ಯ ಇಲಾಖೆಯವರು ಬೋನ್ ಅಳವಡಿಸಿ, ಚಿರತೆಗಳ ಸೆರೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹೊಸಪೇಟೆ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿ ರಾಘವೇಂದ್ರ ಮಾತನಾಡಿ, ಗ್ರಾಮದ ಕಮ್ಮಾರ ಗುಡ್ಡದ ಪ್ರದೇಶ ಪರಿಸರ ಸೂಕ್ಮ ವಲಯ (ಸಿಎಸ್‌ಝಡ್)ಕ್ಕೆ ಸೇರಿದ್ದು, ದರೋಜಿ ಕರಡಿ ಧಾಮದ ವ್ಯಾಪ್ತಿಯಲ್ಲಿದೆ. ಚಿರತೆಗಳ ಚಲನವಲನ ಪರೀಶೀಲಿಸಿ, ಮಾಹಿತಿಯನ್ನು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಕರಡಿ ಧಾಮದ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಈ ಸಂದರ್ಭದಲ್ಲಿ ಡಿವೈಆರ್‌ಎಫ್‌ಒ ವೀರೇಶ್, ರೈತ ಸಂಘದ ಕೊಟ್ಟೂರು ರಮೇಶ್, ಗ್ರಾಮದ ರೈತ ಪಲ್ಲೇದ ಹುಲುಗಪ್ಪ ಸೇರಿ ಇತರರು ಇದ್ದರು.