ವಾಷಿಂಗ್ಟನ್, ಮೇ13, ಸದ್ಯದ ಕೊರೊನವೈರಸ್ ಸೋಂಕಿನ ಪರಿಸ್ಥಿತಿಯಲ್ಲಿ ಮಾತ್ರವಲ್ಲದೆ, ಮುಂದಿನ ದಿನಗಳಲ್ಲೂ ಮನೆಯಿಂದ ಕೆಲಸ ಮಾಡಲು ಇಚ್ಛಿಸಿದರೆ ಎಲ್ಲ ಸಿಬ್ಬಂದಿಗೆ ಅನುಮತಿ ನೀಡುವ ಹೊಸ ನೀತಿಯೊಂದನ್ನು ಜಾರಿಗೊಳಿಸುತ್ತಿರುವುದಾಗಿ ಟ್ವಿಟರ್ ಸಂಸ್ಥೆ ಬುಧವಾರ ಹೇಳಿದೆ.‘ಮನೆಯಿಂದಲೇ ಕಾರ್ಯನಿರ್ವಹಿಸುವ ಪರಿಸ್ಥಿತಿ ಸಂಸ್ಥೆಯ ಉದ್ಯೋಗಿಗಳಿಗೆ ಎದುರಾಗಿದ್ದರೂ ಮುಂದಿನ ದಿನಗಳಲ್ಲೂ ಉದ್ಯೋಗಿಗಳು ಇಚ್ಛಿಸಿದರೆ ಮನೆಯಿಂದಲೇ ಕೆಲಸ ಮಾಡುವುದಕ್ಕೆ ಅನುಮತಿಸಲಾಗುವುದು.’ ಎಂದು ಟ್ವಿಟರ್ ನ ಪ್ರಕಟಣೆ ಮಂಗಳವಾರ ತಿಳಿಸಿದೆ.ಮನೆಯಿಂದ ಸಾಧ್ಯವಾಗದಿದ್ದರೆ ಎಲ್ಲ ಮುನ್ನಚ್ಚರಿಕೆಗಳಿಂದ ಕಚೇರಿಗೆ ಬಂದು ಕೆಲಸ ಮಾಡಲು ಸಹ ಅವಕಾಶವಿದೆ. ಉದ್ಯೋಗಿಗಳು ಸುರಕ್ಷಿತವಾಗಿ ವಾಪಸ್ಸಾಗಬೇಕೆಂಬುದೇ ಸಂಸ್ಥೆಯ ಉದ್ದೇಶವಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಮುಂದಿನ ಸೆಪ್ಟೆಂಬರ್ ವರೆಗೆ ಟ್ವಿಟರ್ ತನ್ನ ಕಚೇರಿಗಳನ್ನು ತೆರೆಯದಿರಲು ನಿರ್ಧರಿಸಿದೆ. ಅಲ್ಲಿಯವರೆಗೆ ಕೆಲ ಸಂದರ್ಭಗಳನ್ನು ಹೊರತುಪಡೆಸಿ ವಾಣಿಜ್ಯ ಪ್ರವಾಸಗಳಿಗೆ ಅವಕಾಶವಿರುವುದಿಲ್ಲ. ಇಡೀ ವರ್ಷದಲ್ಲಿ ವ್ಯಕ್ತಿಗತ ಸಂಪರ್ಕದ ಮತ್ತು ಮುಖಾಮುಖಿಯಾಗುವಂತಹ ಯಾವುದೇ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಟ್ವಿಟರ್ ನ ಪ್ರಕಟಣೆ ತಿಳಿಸಿದೆ.