ಮುಂಬೈ, ಡಿಸೆಂಬರ್ 16, 2024: ಬೆಂಗಳೂರಿನಲ್ಲಿ ಭಾನುವಾರ ನಡೆದ ಡಬ್ಲ್ಯೂಪಿಎಲ್ 2025ರ ಮಿನಿ ಹರಾಜು ಪ್ರಕ್ರಿಯೆಯಲ್ಲಿ ನಾಲ್ವರು ಹೊಸ ಆಟಗಾರ್ತಿಯರನ್ನು ಮುಂಬೈ ಇಂಡಿಯನ್ಸ್ ಗೆ ಸೇರೆ್ಡಗೊಳಿಸಿದ ಬಳಿಕ ತಂಡದ ಬಲಾಬಲದ ಬಗ್ಗೆ ಫ್ರಾಂಚೈಸಿ ಮಾಲೀಕರಾದ ನೀತಾ ಎಂ. ಅಂಬಾನಿ ಅವರು ತಮ್ಮ ತೃಪ್ತಿಯನ್ನು ವ್ಯಕ್ತಪಡಿಸಿದರು. ಜೊತೆಗೆ ತಂಡದ ದೃಷ್ಟಿಕೋನವನ್ನು ವಿವರಿಸಿದ ಅವರು, ಯುವ ಆಟಗಾರ್ತಿಯರನ್ನು ಬೆಳೆಸುವ ತಂಡದ ಬಯಕೆಯನ್ನು ಹಂಚಿಕೊಂಡರು.
ಬೆಂಗಳೂರಿನಲ್ಲಿ ನಡೆದ ಹರಾಜಿನ ನಂತರ ಮಾತನಾಡಿದ ನೀತಾ ಎಂ. ಅಂಬಾನಿ, “ನಾವೆಲ್ಲರೂ ತುಂಬಾ ಸಂತೋಷವಾಗಿದ್ದೇವೆ ಮತ್ತು ಇಂದು ನಾವು ಒಟ್ಟುಗೂಡಿಸಿದ ತಂಡದಿಂದ ತೃಪ್ತರಾಗಿದ್ದೇವೆ. ಇದೇ ಸಮಯದಲ್ಲಿ ಹರಾಜು ಪ್ರಕ್ರಿಯೆಗಳು ಅತ್ಯಾಕರ್ಷಕ ಮತ್ತು ಭಾವನಾತ್ಮಕವಾಗಿರುತ್ತವೆ. ಇಂದು ಹರಾಜಿನಲ್ಲಿ ಭಾಗವಹಿಸಿದ ಎಲ್ಲಾ ಹುಡುಗಿಯರ ಬಗ್ಗೆ ಮತ್ತು ಈಗ ಮುಂಬೈ ಇಂಡಿಯನ್ಸ್ ಕುಟುಂಬದ ಭಾಗವಾಗಿರುವ ಜಿ. ಕಮಲಿನಿ, ನಾಡಿನ್ ಡಿ ಕ್ಲರ್ಕ, ಸಂಸ್ಕೃತಿ ಗುಪ್ತಾ ಮತ್ತು ಅಕ್ಷಿತಾ ಮಹೇಶ್ವರಿ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ” ಎಂದರು. ಅಂಬಾನಿ ಅವರು ನಾಲ್ಕು ಹೊಸ ಆಟಗಾರ್ತಿ ಯರನ್ನು ವಿಶೇಷ ಸಂದೇಶದೊಂದಿಗೆ ಸ್ವಾಗತಿಸಿದರು. “ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ನಾವು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಮುಂಬೈ ಇಂಡಿಯನ್ಸ್ ಯಾವಾಗಲೂ ಯುವ ಪ್ರತಿಭೆಗಳನ್ನು ಶೋಧಿಸಲು, ಪೋಷಿಸಲು ಮತ್ತು ಬೆಳೆಸಲು ಪ್ರಯತ್ನಿಸುತ್ತದೆ. ನಾವು ಇದನ್ನು ನಮ್ಮ ಪುರುಷರ ತಂಡದೊಂದಿಗೂ ಮಾಡಿದ್ದೇವೆ ಮತ್ತು ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಈಗ ತಿಲಕ್ ವರ್ಮ ಅವರು ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ನೋಡುವಾಗ ಹೆಮ್ಮೆಯ ಭಾವನೆ ಬರುತ್ತದೆ. ನಾವು ನಮ್ಮ ಹುಡುಗಿಯರೊಂದಿಗೆ ಅದೇ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ. ಕಳೆದ ವರ್ಷ ನಾವು ಸಜನಾ ಅವರನ್ನು ಹರಾಜಿನಲ್ಲಿ ಪಡೆದುಕೊಂಡೆವು. ಆಕೆ ಈಗ ಟೀಮ್ ಇಂಡಿಯಾ ಪರ ಆಡುತ್ತಿರುವುದನ್ನು ನೋಡಲು ಅದ್ಭುತವೆನಿಸುತ್ತದೆ" ಎಂದು ನೀತಾ ಎಂ. ಅಂಬಾನಿ ಅವರು ವಿವರಿಸಿದರು.
ಮುಂಬೈ ಇಂಡಿಯನ್ಸ್ ಈ ಬಾರಿ ಹೆಚ್ಚು ರೇಟಿಂಗ್ ಪಡೆದ ಮತ್ತು ಹೆಚ್ಚು ಅಪೇಕ್ಷಿತ ಆಟಗಾರ್ತಿ ಎನಿಸಿದ ಜಿ ಕಮಲಿನಿ ಅವರನ್ನು ತನ್ನ ಬಳಗಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ತಮಿಳುನಾಡಿನ 16 ವರ್ಷದ ಯುವತಿ ಭಾನುವಾರವೇ 19 ವಯೋಮಿತಿ ಏಷ್ಯಾಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಕಿರಿಯರ ತಂಡದ ಪರ ತನ್ನ ಚೊಚ್ಚಲ ಪಂದ್ಯವನ್ನು ಆಡಿದರು. ಹರಾಜಿ ನಲ್ಲಿ ಸೇರಿಸಿಕೊಂಡ ಹೊಸ ಆಟಗಾರ್ತಿಯರ ಕುರಿತು ಮಾತನಾಡಿದ ಶ್ರೀಮತಿ ಅಂಬಾನಿ, “ಈ ವರ್ಷ ನಾವು 16ರ ಹರೆಯದ ಕಮಲಿನಿ ಸೇರೆ್ಡಯಿಂದ ತುಂಬಾ ಉತ್ಸುಕರಾಗಿದ್ದೇವೆ. ನಮ್ಮ ಪ್ರತಿಭಾ ಶೋಧಕರು ಕಳೆದ ಸ್ವಲ್ಪ ಸಮಯದಿಂದ ಅವಳನ್ನು ಗಮನಿಸುತ್ತಿದ್ದರು ಮತ್ತು ಅವಳು ತುಂಬಾ ಉತ್ತೇಜಕ ಹೊಸ ಪ್ರತಿಭೆ ಎನಿಸಿದ್ದಳು. ಆದ್ದರಿಂದ, ಒಟ್ಟಾರೆಯಾಗಿ, ಹರಾಜಿನಲ್ಲಿ ನಮ್ಮ ತೃಪ್ತಿಕರ ದಿನವಾಗಿತ್ತು" ಎಂದರು.
ಮುಂಬೈ ಇಂಡಿಯನ್ಸ್ ಡಬ್ಲ್ಯೂಪಿಎಲ್ ನಲ್ಲಿ ಉದ್ಘಾಟನಾ ಆವೃತ್ತಿಯ ಚಾಂಪಿಯನ್ ಆಗಿದೆ ಮತ್ತು ಕಮಲಿನಿ ಜೊತೆಗೆ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ನಡಿನ್ ಡಿ ಕ್ಲರ್ಕ, ಮಧ್ಯಪ್ರದೇಶದ ಆಲ್‌ರೌಂಡರ್ ಸಂಸ್ಕೃತಿ ಗುಪ್ತಾ ಮತ್ತು ರಾಜಸ್ಥಾನದ ವೇಗಿ ಅಕ್ಷಿತಾ ಮಹೇಶ್ವರಿ ಅವರನ್ನು ಪಡೆಯುವ ಮೂಲಕ ತಂಡ 18 ಸದಸ್ಯರ ಪೂರ್ಣ ಬಲವನ್ನು ಹೊಂದಿದೆ.