ನವದೆಹಲಿ, ಫೆ 24,ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅದ್ಧೂರಿ ಔತಣಕೂಟ ಆಯೋಜಿಸಿದ್ದಾರೆ. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಮ್ಮುಖದಲ್ಲಿ ಏರ್ಪಡಿಸಿರುವ ಭರ್ಜರಿ ಔತಣ ಕೂಟಕ್ಕೆ ಹಲವು ಗಣ್ಯಾತಿಗಣ್ಯರಿಗೆ ಮೋದಿ ಆಹ್ವಾನ ನೀಡಿದ್ದಾರೆ. ಟ್ರಂಪ್ ಔತಣಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಆಮಂತ್ರಣ ಬಂದಿದೆ. ಯಡಿಯೂರಪ್ಪ ಸೇರಿ ದಕ್ಷಿಣ ಭಾರತದ ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಸಹ ಔತಣ ಕೂಟಕ್ಕೆ ಆಹ್ವಾನಪಡೆದಿದ್ದಾರೆ. ಶಿವಮೊಗ್ಗ ಪ್ರವಾಸದಲ್ಲಿರುವ ಯಡಿಯೂರಪ್ಪ ಮಂಗಳವಾಗ ಬೆಳಗ್ಗೆ ಬೆಂಗಳೂರಿಗೆ ವಾಪಸಾಗಲಿದ್ದು, ಬಳಿಕ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಬಜೆಟ್ ಸಮೀಪಿಸುತ್ತಿದ್ದು, ಸಮಯದ ಅಭಾವದ ಹಿನ್ನೆಲೆಯಲ್ಲಿ ದೆಹಲಿಗೆ ಹೋಗುವ ಕುರಿತು ಯಡಿಯೂರಪ್ಪ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗಿದೆ. ಆದರೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಬಹುತೇಕ ಮುಖ್ಯಮಂತ್ರಿಗಳು ಈ ಔತಣ ಕೂಟದಲ್ಲಿ ಭಾಗವಹಿಸುತ್ತಿದ್ದು, ಯಡಿಯೂರಪ್ಪ ಗೈರು ಹಾಜರಿ ತಪ್ಪು ಸಂದೇಶ ಹರಡಬಹುದು ಎನ್ನುವ ಕಾರಣದಿಂದ ಯಡಿಯೂರಪ್ಪ ಔತಣ ಕೂಟದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.