ಕೊರೊನಾ ಪೀಡಿತ ದೆಹಲಿ ನಿವಾಸಿಗಳಿಗೆ ಮಾತ್ರ ರಾಜ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ: ಕೇಜ್ರಿವಾಲ್

ನವದೆಹಲಿ, ಜೂನ್ 7, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, ಹೆಚ್ಚುತ್ತಿರುವ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ, ಸ್ಥಳಿಯರಿಗೆ ಮಾತ್ರ ದೆಹಲಿ ಸರ್ಕಾರದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುವುದು. ಆದರೆ ಕೇಂದ್ರ ಸರ್ಕಾರಿ ಆಸ್ಪತ್ರೆಗಳು ಮೊದಲಿನಂತೆ ಎಲ್ಲ ಜನರಿಗೆ ತೆರೆದಿರುತ್ತವೆ ಎಂದು ತಿಳಿಸಿದ್ದಾರೆ. 

ಸಂಪುಟ ಸಭೆಯಲ್ಲಿ ದೆಹಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ದೆಹಲಿ ಸರ್ಕಾರದ ಅಡಿಯಲ್ಲಿರುವ ಬರುವ ಆಸ್ಪತ್ರೆಗಳು ಮತ್ತು ದೆಹಲಿಯ ಖಾಸಗಿ ಆಸ್ಪತ್ರೆಗಳಲ್ಲಿ ದೆಹಲಿಯ ಜನರಿಗೆ ಮಾತ್ರ ಚಿಕಿತ್ಸೆ ನೀಡಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದೇ ಸಮಯದಲ್ಲಿ, ಎಲ್ಲಾ ಜನರು ಕೇಂದ್ರ ಸರ್ಕಾರಿ ಆಸ್ಪತ್ರೆಗಳಾದ ಏಮ್ಸ್, ಸಫ್ದರ್ಜಂಗ್ ಮತ್ತು ರಾಮ್ ಮನೋಹರ್ ಲೋಹಿಯಾ (ಆರ್ಎಂಎಲ್) ಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ. 

ಮೊದಲ 60 ರಿಂದ 70 ಪ್ರತಿಶತದಷ್ಟು ಜನರು ಇಲ್ಲಿನ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದರು. ಆದರೆ ದೆಹಲಿಯಲ್ಲಿ ಈ ಸಮಯದಲ್ಲಿ ಸಮಸ್ಯೆ ಇದ್ದು, ಕೊರೊನಾ ಪ್ರಕರಣ ವೇಗವಾಗಿ ಹೆಚ್ಚುತ್ತಿವೆ ಎಂದು ಅವರು ಹೇಳಿದರು. ಅಂತಹ ಪರಿಸ್ಥಿತಿಯಲ್ಲಿ, ಇಡೀ ದೇಶವಾಸಿಗಳಿಗಾಗಿ ಆಸ್ಪತ್ರೆಗಳನ್ನು ತೆರೆದರೆ ದೆಹಲಿಯ ಜನರು ಎಲ್ಲಿಗೆ ಹೋಗುತ್ತಾರೆ ಎಂದು ಪ್ರಶ್ನಿಸಿದ್ದಾರೆ. “ಜೂನ್ ಅಂತ್ಯದ ವೇಳೆಗೆ ದೆಹಲಿಯಲ್ಲಿ 15,000 ಕೋವಿಡ್ ಹಾಸಿಗೆಗಳು ಬೇಕಾಗುತ್ತವೆ ಎಂದು ಸಮಿತಿ ಹೇಳಿದೆ. ಪ್ರಸ್ತುತ, ದೆಹಲಿಯಲ್ಲಿ ಒಂಬತ್ತು ಸಾವಿರ ಹಾಸಿಗೆಗಳಿದ್ದು, ಎಲ್ಲ ಜನರಿಗೆ ಆಸ್ಪತ್ರೆಗಳನ್ನು ತೆರೆದರೆ, ಒಂಬತ್ತು ಸಾವಿರ ಮೂರು ದಿನಗಳಲ್ಲಿ ತುಂಬಲ್ಪಡುತ್ತವೆ” ಎಂದು ತಿಳಿಸಿದ್ದಾರೆ. ಅಲ್ಲದೆ 7.5 ಲಕ್ಷ ಜನರು ಸರ್ಕಾರಕ್ಕೆ ಸಲಹೆಗಳನ್ನು ನೀಡಿದ್ದಾರೆ ಎಂದು ಅವರು ಹೇಳಿದರು. ಅದರಲ್ಲಿ 90 ಪ್ರತಿಶತದಷ್ಟು ಜನರು ಕರೋನಾ ಬಿಕ್ಕಟ್ಟಿನವರೆಗೂ ದೆಹಲಿ ಆಸ್ಪತ್ರೆಗಳು ದೆಹಲಿಯವರಿಗೆ ಮಾತ್ರ ಇರಬೇಕು ಎಂದು ಹೇಳಿದ್ದಾರೆ.

ಜೂನ್ 8 ರಿಂದ ದೆಹಲಿ ತನ್ನ ಗಡಿಯನ್ನು ತೆರೆಯುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು. ಇದರೊಂದಿಗೆ ಗಾಜಿಯಾಬಾದ್, ನೋಯ್ಡಾ, ಗುರುಗ್ರಾಮ್ ಮತ್ತು ಫರಿದಾಬಾದ್ ಜನರು ಸುಲಭವಾಗಿ ದೆಹಲಿಗೆ ಬರಲು ಸಾಧ್ಯವಾಗುತ್ತದೆ. ಇದರೊಂದಿಗೆ ದೆಹಲಿಯಲ್ಲಿ ರೆಸ್ಟೋರೆಂಟ್‌ಗಳು, ಮಾಲ್‌ಗಳು ಮತ್ತು ಧಾರ್ಮಿಕ ಸ್ಥಳಗಳನ್ನು ತೆರೆಯಲಾಗುವುದು. ಈ ಸಮಯದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು.