ಧಾರವಾಡ 06: ಸಂಧಿವಾತವು ಮಹಿಳೆಯರು ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರನ್ನು ಕಾಡುವ ಕಾಯಿಲೆಯಾಗಿದ್ದು, ಇದನ್ನು ನಿರ್ಲಕ್ಷಿಸಿದರೆ ಅಪಾಯ. ಆದರೆ ಚಿಕಿತ್ಸೆಯೊಂದೇ ಪರಿಹಾರ ಎಂದು ಧಾರವಾಡದ ಡಾ. ಬಿ.ಡಿ ಜತ್ತಿ ಹೋಮಿಯೋಪಥಿ ಕಾಲೇಜಿನ ಪ್ರಾಧ್ಯಾಪಕ ಡಾ. ಮಹಾದೇವ ಹಳ್ಳಿಕೇರಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಖ್ಯಾತ ಹೋಮಿಯೋಪತಿ ವೈದ್ಯ ಡಾ. ಎಚ್. ಎಚ್. ಸಿನ್ನೂರ ದತ್ತಿ ಕಾರ್ಯಕ್ರಮ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಂಧಿವಾತ ಹಾಗೂ ಹೋಮಿಯೋಪಥಿ ಪರಿಹಾರ’ ವಿಷಯ ಕುರಿತು ಅವರು ಮಾತನಾಡಿದರು.
ಸಂಧಿವಾತದಲ್ಲಿ ಪ್ರಕಾರಗಳು ಅನೇಕ, ಆದರೆ ಗೌಟ್ ಎಂಬ ಸಂಧಿವಾತವು ಅಧಿಕ ನೋವು ಹಾಗೂ ಉರಿಯೂತವನ್ನು ಉಂಟು ಮಾಡುವುದಾಗಿದೆ. ಸಾಮಾನ್ಯವಾಗಿ ಭಾರ ಹೊರುವ ಕೀಲುಗಳಾದ ಸೊಂಟ, ಮೊಣಕಾಲು, ಮೊಳಕೈ, ಬೆನ್ನು ಮೂಳೆ ಮೇಲೆ ಇದರ ಪ್ರಭಾವ ಹೆಚ್ಚು. ದೈಹಿಕ ಶ್ರಮ ಇಲ್ಲದವರಿಗೆ, ಬೊಜ್ಜಿನವರಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ. ತಂಪು ವಾತಾವರಣವು ನೋವು, ಉರಿಯೂತ ಹೆಚ್ಚಾಗಲು ಕಾರಣವಾಗಿದೆ. ಸಾಮಾನ್ಯವಾಗಿ ಹೋಮಿಯೋಪಥಿ ಸೇರಿ ಎಲ್ಲಾ ವೈದ್ಯ ಪದ್ಧತಿಯಲ್ಲಿ ಇದಕ್ಕೆ ಚಿಕಿತ್ಸೆ ಇದೆ.
ಸಂಧಿವಾತ ಕಾಣಿಸಿಕೊಂಡಲ್ಲಿ ಸ್ವಯಂ ಚಿಕಿತ್ಸೆ ಅನುಸರಿಸದೇ ವೈದ್ಯರ ಸಲಹೆ ಪಡೆಯಬೇಕು. ವೈದ್ಯರು ರೋಗ ಲಕ್ಷಣ ಗಮನಿಸಿ ಚಿಕಿತ್ಸೆ ನೀಡುತ್ತಾರೆ. ಸ್ವಯಂ ಓಷಧಿ ಕೆಲವು ಸಲ ಅಡ್ಡ ಪರಿಣಾಮ ಬೀರಬಹುದು. ಸೂಕ್ತ ಲಘು ವ್ಯಾಯಾಮ, ಆಹಾರ ಪದ್ಧತಿಯಿಂದಲೂ ಈ ರೋಗವನ್ನು ತಡೆಗಟ್ಟಬಹುದು. ಕೆಲವು ಸಲ ಈ ರೋಗಕ್ಕೆ ಪಥ್ಯವನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು.
ಖ್ಯಾತ ಮನೋ ಆರೋಗ್ಯ ತಜ್ಞ ಡಾ. ಆನಂದ ಪಾಂಡುರಂಗಿ ಮಾತನಾಡಿ ಡಾ. ಎಚ್.ಎಚ್. ಸಿನ್ನೂರ ಹೋಮಿಯೋಪಥಿಯ ಮಹಾನ್ ಸಾಧಕರು. 60 ವರ್ಷದ ಅವರ ನಿಸ್ವಾರ್ಥ ಸೇವೆ ಅನುರಕರಣೀಯ. ಈ ಭಾಗದಲ್ಲಿ ಹೋಮಿಯೋಪಥಿ ಚಿಕಿತ್ಸೆ ಜನಪ್ರಿಯಗೊಳಿಸಿದವರಾಗಿದ್ದಾರೆ. ವೈದ್ಯರು ತಮ್ಮ ವೃತ್ತಿಯ ಜೊತೆಗೆ ಇತರ ವೈದ್ಯ ಪದ್ಧತಿಯನ್ನು ಗೌರವಿಸಬೇಕೆಂದರು.
ಕ.ವಿ.ವ. ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಮಹಾಂತಯ್ಯ ಮಠಪತಿ ಅವರನ್ನು ಸನ್ಮಾನಿಸಲಾಯಿತು. ದತ್ತಿದಾನಿ ಡಾ. ಪಾರ್ವತಿ ಹಾಲಭಾವಿ ಬರೆದ ‘ಚಿಂತನ-ಮಂಥನ’ ಕೃತಿ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಸುರೇಶ ಹಾಲಭಾವಿ ಇದ್ದರು.
ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಧ. ಹೊರಕೇರಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಡಾ. ಸಂಜೀವ ಕುಲಕರ್ಣಿ, ಪಿ. ಎಚ್. ನೀರಲಕೇರಿ, ಎಸ್.ಜಿ. ಪಾಟೀಲ, ನಿಂಗಣ್ಣ ಕುಂಟಿ, ಬಸವರಾಜ ಲೋಕೂರ, ಎಂ.ಎಸ್. ನರೇಗಲ್, ಸವಿತಾ ಮಠಪತಿ, ಅನ್ನಪೂರ್ಣ ಲೋಕೂರ, ಅಶೋಕ ಚಿಕ್ಕೋಡಿ, ನೀಲಕ್ಕಾ ಬೆಲ್ಲದ ಸೇರಿದಂತೆ ಹಾಲಭಾವಿ ಬೆಲ್ಲದ ಪರಿವಾರದವರು ಇದ್ದರು.