ಗ್ರೀಕ್ ನಲ್ಲಿ ಏಪ್ರಿಲ್ 6 ರವರೆಗೆ ಪ್ರಯಾಣ ನಿರ್ಬಂಧ

ಅಥೆನ್ಸ್, ಮಾರ್ಚ್ 23, ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಾಣು ಸೋಂಕು ನಿಯಂತ್ರಣ ಸಂಬಂಧ ಗ್ರೀಕ್ ನಲ್ಲಿ ಮತ್ತು ಗ್ರೀಸ್ ದೇಶದಿಂದ ಹೊರಗೆ ಎಲ್ಲಾ ಬಗೆಯ ನಾಗರಿಕರ ಓಡಾಟದ ಮೇಲೆ ಅಲ್ಲಿನ ಸರ್ಕಾರ ಏಪ್ರಿಲ್ 6 ರವರೆಗೆ ನಿರ್ಬಂಧ ವಿಧಿಸಿದೆ ಎಂದು ನಾಗರಿಕ ರಕ್ಷಣ ಮತ್ತು ಬಿಕ್ಕಟ್ಟು ನಿರ್ವಹಣಾ ಖಾತೆ ಉಪಸಚಿವ ನಿಕೋಸ್ ಚಾರ್ದಾಲಿಯಾಸ್ ತಿಳಿಸಿದ್ದಾರೆ.
ಗ್ರೀಕ್ ಪ್ರಧಾನಿ ಕ್ಯೂರಿಕೋಸ್ ಮಿಟ್ಸೋಟಾಕಿ ಭಾನುವಾರ ಈ ಸಂಬಂಧ ಆದೇಶ ನೀಡಿದ್ದಾರೆ. ಗ್ರೀನ್ ವಿಚ್ ಕಾಲಮಾನ ಸೋಮವಾರ 4 ಗಂಟೆ ಅಂದರೆ ಸ್ಥಳೀಯ ಕಾಲಮಾನ 6 ಗಂಟೆಯಿಂದ  ಈ ನಿರ್ಬಂಧ ಜಾರಿಗೆ ಬಂದಿದೆ. ಈ ನಿರ್ಬಂಧ ಏಪ್ರಿಲ್ 6 ರವರೆಗೆ ಮುಂದುವರಿಯಲಿದೆ ಎಂದು ಹೇಳಲಾಗಿದೆ.
ಅನಗತ್ಯವಾಗಿ ಪ್ರಯಾಣಿಸುವವರಿಗೆ 150 ಯೂರೋ ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕೆಲಸಕ್ಕೆ, ಅಗತ್ಯ ಸಾಮಾನು ಕೊಳ್ಳಲು ದಿನಸಿ ಅಂಗಡಿಗಳಿಗೆ, ಔಷಧ ಮಳಿಗೆಗಳಿಗೆ ಮತ್ತು ಆಸ್ಪತ್ರೆಗೆ ಹೋಗುವವರಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ. ಆನ್ ಲೈನ್ ಬ್ಯಾಂಕಿಂಗ್ ಲಭ್ಯವಿಲ್ಲದ ಪ್ರಕರಣಗಳಿಗೆ ಮಾತ್ರ ಬ್ಯಾಂಕ್ ಗೆ ಭೇಟಿ ನೀಡುವ ಅವಕಾಶವಿದೆ.
ಕಾರ್ ಗಳಲ್ಲಿ ಚಾಲಕ ಮತ್ತು ಇನ್ನು ಕೇವಲ ಒಬ್ಬ ವ್ಯಕ್ತಿ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ.ಒಂದೇ ದಿನದಲ್ಲಿ ಹಿಂದಿನ ದಿನಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡ ಹಿನ್ನೆಲೆಯಲ್ಲಿ ಸರಾಸರಿ 94 ಕ್ಕೆ ಏರಿಕೆಯಾದ ಕಾರಣ ಅಲ್ಲಿನ ಸರ್ಕಾರ ಭದ್ರತಾ ಕ್ರಮಗಳನ್ನು ಹೆಚ್ಚಿಸಿದೆ.   ಗ್ರೀಕ್ ನಲ್ಲಿ ಈವರೆಗೆ 624 ಪ್ರಕರಣಗಳು ದೃಢಪಟ್ಟಿದ್ದು 15 ಜನರು ಈ ಸೋಂಕಿಗೆ ಬಲಿಯಾಗಿದ್ದಾರೆ.