ಭಾರತದ ವಿವಿಧತೆಯನ್ನು ತಿಳಿಯಲು ಭಾಷಾಂತರ ಅಗತ್ಯ : ಬಸವರಾಜ ಟಿ.ಎಚ್

Translation is necessary to understand India's diversity: Basavaraj TH

ಭಾರತದ ವಿವಿಧತೆಯನ್ನು ತಿಳಿಯಲು ಭಾಷಾಂತರ ಅಗತ್ಯ : ಬಸವರಾಜ ಟಿ.ಎಚ್ 

ಹಂಪಿ 07: ಹಲವಾರು ರಾಜ್ಯಗಳನ್ನು ಹೊಂದಿದ ಬಹುತ್ವ ಭಾರತದಲ್ಲಿ ಸಂಸ್ಕೃತಿ, ಭಾಷೆ, ಆಚಾರ ವಿಚಾರ ಭಿನ್ನವಾಗಿವೆ ಅದನ್ನು ನಾವು ತಿಳಿಯಬೇಕಾದರೆ ಭಾಷಾಂತರವನ್ನು ಕಲಿಯಬೇಕು ಎಂದು ಕನ್ನಡ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿ ಮಂಡಳಿ ಸದಸ್ಯರಾದ ಬಸವರಾಜ್ ಟಿ.ಎಚ್ ಅವರು ತಿಳಿಸಿದರು. ವಿದ್ಯಾರಣ್ಯ : ಕನ್ನಡ ವಿಶ್ವವಿದ್ಯಾಲಯದ ನುಡಿ ಕಟ್ಟಡದಲ್ಲಿ 7ನೇ ಮಾರ್ಚ್‌ 2025ರಂದು ಭಾಷಾಂತರ ಕೇಂದ್ರ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಭಾಷಾಂತರ ಅಧ್ಯಯನ ವಿಭಾಗ ಅಲುಮ್ನಿ ಇವರ ಸಹಯೋಗದಲ್ಲಿ ಮೂರು ದಿನಗಳ ಭಾಷಾಂತರ ತರಬೇತಿ ಕಮ್ಮಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ, ಅನುವಾದದಲ್ಲಿ ಮೂಲಕೃತಿಗೆ ಹಲವಾರು ಬಾರಿ ಧಕ್ಕೆ ಉಂಟಾಗುವ ಸಾಧ್ಯತೆ ಇರುತ್ತದೆ, ಅದನ್ನು ಅರಿತುಕೊಳ್ಳಬೇಕು. ಇಂಗ್ಲೀಷ್ ಭಾಷೆಯಲ್ಲಿ ನಾವು ಒಮ್ಮೆಲೇ ಧುಮುಕುತ್ತಿದ್ದೇವೆ. ನಿಧಾನವಾಗಿ. ಸರಳವಾಗಿ ಅರ್ಥ ಮಾಡಿಕೊಂಡು ಕಲಿಯಬೇಕು ಎಂದರು. ಇಂಗ್ಲಿಷ್‌ನ ಬಹುದೊಡ್ಡ ಬರಹಗಾರರಾದ ಜಾರ್ಜ್‌ ಬರ್ನಾಡ್ ಶಾ ಎಲ್ಲರಿಗೂ ಇಂಗ್ಲಿಷ್ ಬರುತ್ತದೆ. ಆದರೆ ಅದನ್ನು ಒಪ್ಪುವ ರೀತಿ ನಮಗೆ ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ. ಬೇರೆ ದೇಶಗಳಲ್ಲಿ ಒಂದೇ ರೀತಿಯ ಇಂಗ್ಲಿಷ್ ಮಾತನಾಡುವವರು ಸಿಗುವುದು ಕಷ್ಟ. ಅವರು ಮಾತನಾಡುವ ಶೈಲಿ ಭಿನ್ನವಾಗಿರುತ್ತದೆ. ಭಾಷೆಯು ಬಳಕೆಯಿಂದ ಬರುತ್ತದೆ ವಿನಹ ಓದಿದರೆ, ಬರೆದರೆ ಬರುವುದಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನಿವಾರ್ಯದ ತೂಗುಗತ್ತಿಯಾಗಿ ಇಂಗ್ಲಿಷ್ ನಿಂತಿದೆ ಎಂದರು. ಭಾಷಾಂತರ ಕೇಂದ್ರ ಮತ್ತು ಐ.ಕ್ಯೂ.ಎಸಿ ನಿರ್ದೇಶಕರಾದ ಡಾ.ಎ. ಮೋಹನ್ ಕುಂಟಾರ್ ಪ್ರಾಸ್ತಾವಿಕ ಮಾತನಾಡುತ್ತಾ, ಪ್ರತಿ ವರ್ಷ ಎಂ.ಎ ವಿದ್ಯಾರ್ಥಿಗಳಿಗಾಗಿ ಭಾಷಾಂತರ ತರಬೇತಿ ಕಮ್ಮಟವನ್ನು ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ನಾನಾ ಕಡೆಗಳಿಂದ ಬಂದಿರುವ ವಿದ್ಯಾರ್ಥಿಗಳಿಗೆ ಇಂಗ್ಲೀಷ್‌ನಿಂದ ಕನ್ನಡಕ್ಕೆ ಅನುವಾದ ಮಾಡುವುದನ್ನು ಹೇಳಿಕೊಡಲಾಗುತ್ತದೆ. ಭಾಷಾಂತರ ಎನ್ನುವುದು ಕೇವಲ ತರಗತಿಯ ಚಟುವಟಿಕೆ ಮಾತ್ರ ಅಲ್ಲ ಇದನ್ನು ವಿಸ್ತರಿಸಬೇಕು. ಇಂಗ್ಲಿಷ್ ಒಂದೇ ಭಾಷೆ ಅಲ್ಲದೆ ನಮ್ಮ ಸಮೀಪದ ಭಾಷೆಗಳನ್ನು ತಿಳಿದುಕೊಂಡು ಅವುಗಳನ್ನು ಭಾಷಾಂತರ ಮಾಡುವ ಕಲೆಯನ್ನು ವಿದ್ಯಾರ್ಥಿಗಳು ಕಲಿತುಕೊಳ್ಳಬೇಕು. ಭಾಷಾ ಸಂಬಂಧಿಯಾಗಿ ಮಾಡುವ ಕಾರ್ಯಗಳಿಗೆ ಗೊಂದಲಗಳು ಬಂದಲ್ಲಿ ಮುಕ್ತವಾಗಿ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು. ಭಾಷಾಂತರದಲ್ಲಿ ವೃತ್ತಿ ಸಾಧ್ಯತೆಯು ಬಹಳ ಇದೆ ಉಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು. ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾ ನಿಕಾಯದ ಡೀನರಾದ ಡಾ.ಎಫ್‌.ಟಿ. ಹಳ್ಳಿಕೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಮಾತೃ ಭಾಷೆಯೊಂದಿಗೆ ಇನ್ನೊಂದು ಭಾಷೆಯನ್ನು ಕಲಿಯುವುದು ಇಂದಿನ ಕಾಲದಲ್ಲಿ ಮುಖ್ಯವಾಗಿದೆ. ಭಾಷಾಂತರ ಕಲೆಯನ್ನು ಹವ್ಯಾಸವಾಗಿ ಬೆಳೆಸಿದರೆ ಕಥೆ, ಕೃತಿ, ಲೇಖನಗಳನ್ನು ಬೇರೆ ಭಾಷೆಗೆ ಅನುವಾದ ಮಾಡುವುದು ಸುಲಭವಾಗುತ್ತದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಸುವ ಇಂತಹ ಭಾಷಾಂತರ ಕಮ್ಮಟಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತವೆ ಎಂದರು. ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖಸ್ಥರು, ಸಂಪನ್ಮೂಲ ವಿದ್ವಾಂಸರು, ಪ್ರಾಧ್ಯಾಪಕರು, ಬೋಧಕ,  ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಐ.ಕ್ಯೂ.ಎ.ಸಿ. ಸಹಾಯಕ ನಿರ್ದೇಶಕರಾದ ಡಿ. ಪ್ರಭಾ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.