ಬೆಂಗಳೂರು, ಡಿ.17 ಸಂಚಾರ
ನಿಯಮ ಉಲ್ಲಂಘಿಸುವವರ ಮೇಲೆ ನಿಗಾ ಇಡಲು ಸಾಕಷ್ಟು ಪೊಲೀಸರ ಕೊರತೆ ಇರುವುದರಿಂದ ಇದೀಗ ಪೊಲೀಸ್ ಇಲಾಖೆ
ತಂತ್ರಜ್ಞಾನದ ಮೊರೆ ಹೋಗಿದೆ. ಸಂಚಾರ ನಿಯಮ ಉಲ್ಲಂಘನೆಯ
ಮೇಲೆ ನಿಗಾ ಇಡಲು ಪ್ರಮುಖ ವೃತ್ತಗಳಲ್ಲಿ ನಿಲ್ಲಿಸಿದ
ಹಾಗೂ ಕೂರಿಸಿರುವ ಸಂಚಾರ ಪೊಲೀಸ್ ಬೊಂಬೆ(ಮ್ಯಾನ್‌ಕ್ವೀನ್)ಗಳನ್ನು ಅಳವಡಿಸುತ್ತಿದೆ. ಈ ಬೊಂಬೆಗಳ
ವಿಶೇಷತೆ ಎಂದರೆ, ಅದರ ಕಣ್ಣಲ್ಲಿ ಅತ್ಯಂತ ಗುಣಮಟ್ಟದ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅವುಗಳ ಮೂಲಕ
ಸಂಚಾರ ನಿಯಮ ಉಲ್ಲಂಘನೆ ಚಿತ್ರೀಕರಣಗೊಂಡು ಅದರ ಕೇಂದ್ರ ಸ್ಥಾನಕ್ಕೆ ಅದನ್ನು ಕಳುಹಿಸುತ್ತದೆ.ನಗರದ
ಮಾಗಡಿ ರಸ್ತೆ, ಹುಳಿಮಾವು, ಎಂ.ಜಿ.ರಸ್ತೆ ಹಾಗೂ ಸುತ್ತಮುತ್ತಲ
ಪ್ರದೇಶಗಳ 30 ಕಡೆಗಳಲ್ಲಿ ಈಗಾಗಲೇ ಸಂಚಾರ ಪೊಲೀಸರು
ಧರಿಸುವ ಸಮವಸ್ತ್ರ, ಜಾಕೆಟ್, ಟೋಪಿಯನ್ನು ತೊಡಿಸಿರುವ ಬೊಂಬೆಗಳನ್ನು ನಿಲ್ಲಿಸಲಾಗಿದೆ. ಗೊಂಬೆಗಳ ಕಣ್ಣಲ್ಲಿ ಹೈರೆಸಲ್ಯೂಷನ್ ಕ್ಯಾಮೆರಾ ಅಳವಡಿಸಲಾಗುತ್ತಿದ್ದು
ಅದು ಸಂಚಾರ ನಿಮಯಗಳನ್ನು ಉಲ್ಲಂಘನೆ ಮಾಡಿದವರ ಮೇಲೆ
ಕಣ್ಣಿಡಲಿದೆ. ಸಂಚಾರ ನಿಯಮ ಉಲ್ಲಂಘನೆಯು ಒಮ್ಮೆ ಮ್ಯಾನ್‌ಕ್ವೀನ್‌ಗಳ
ಕಣ್ಣಲ್ಲಿ ಸೆರೆಯಾದರೆ, ಮುಂದಿನ ಸಿಗ್ನಲ್‌ನಲ್ಲಿರುವ ಪೊಲೀಸರಿಗೆ ಈ ಬಗ್ಗೆ ಮಾಹಿತಿ ರವಾನೆಯಾಗಲಿದೆ.
ಆಗ ಅಲ್ಲಿ ನಿಂತಿರುವ ಪೊಲೀಸರು ತಪ್ಪಿತಸ್ಥ ವಾಹನ ಸವಾರರನ್ನು ತಡೆಯಲಿದ್ದಾರೆ. ನಗರ ಪೊಲೀಸ್ ಆಯುಕ್ತರು ಈಗಾಗಲೇ ನಾಲ್ವರು ಇಂಜಿನಿಯರ್‌ಗಳೊಂದಿಗೆ ಮಾತುಕತೆ
ನಡೆಸಿ ಹೈರೆಸಲ್ಯೂಷನ್ ಕ್ಯಾಮೆರಾ ಅಳವಡಿಸಲು ತಯಾರಿ
ನಡೆಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ರೋಬೊಟಿಕ್ ಮಾದರಿಯ ತಂತ್ರಜ್ಞಾನವನ್ನು ಮ್ಯಾನ್‌ಕ್ವೀನ್‌ಗಳಲ್ಲಿ ಅಳವಡಿಸುವ ಬಗ್ಗೆ ತಯಾರಿ ನಡೆದಿದೆ.ಪೊಲೀಸ್
ಬೊಂಬೆಯನ್ನು ದೂರದಿಂದ ನೋಡಿದರೆ ನೈಜ ಪೊಲೀಸ್ ನೋಡಿದಂತೆ
ಭಾಸವಾಗುತ್ತದೆ. ಅದನ್ನು ಕಂಡರೆ ವಾಹನ ಸವಾರರು ಭಯಪಡಬಹುದು.
ಸಂಚಾರ ನಿಯಮ ಪಾಲಿಸಬಹುದೆಂಬ ವಿಶ್ವಾಸವಿತ್ತು. ಅದರೊಳಗೆ ಕ್ಯಾಮರ ಅಳವಡಿಸಿರುವುದರಿಂದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ ಪೊಲೀಸರು.ಪೊಲೀಸ್ ಇಲಾಖೆಯಲ್ಲಿ
ಸಿಬ್ಬಂದಿ ಕೊರತೆಯಿರುವುದರಿಂದ ಎಲ್ಲ ಕಡೆಯಲ್ಲೂ ಸಿಬ್ಬಂದಿಯನ್ನು
ಕರ್ತವ್ಯಕ್ಕೆ ನಿಯೋಜಿಸಲು ಸಾಧ್ಯವಾಗುತ್ತಿಲ್ಲ. ಪೊಲೀಸರು
ಇಲ್ಲವೆಂಬುದು ಗೊತ್ತಾಗುತ್ತಿದ್ದಂತೆ ನಿಯಮ ಉಲ್ಲಂಘಿಸುವವರ
ಸಂಖ್ಯೆ ಹೆಚ್ಚುತ್ತಿದ್ದು ಅದನ್ನು ತಪ್ಪಿಸಲು ಪೊಲೀಸ್ ಬೊಂಬೆಗಳನ್ನು ನಿಲ್ಲಿಸಲಾಗುತ್ತದೆ. ಪೊಲೀಸರನ್ನು ಕಂಡರೆ ಮಾತ್ರ ನಿಯಮ
ಉಲ್ಲಂಘಿಸುವವರು ಹೆಚ್ಚಿದ್ದಾರೆ. ಹೀಗಾಗಿ, ಪೊಲೀಸರನ್ನೇ
ಹೋಲುವ ಬೊಂಬೆಗಳನ್ನು ಪ್ರಾಯೋಗಿಕವಾಗಿ ನಿಲ್ಲಿಸಲಾಗಿದ್ದು
ಇದರ ಪ್ರತಿಕ್ರಿಯೆ ಗಮನಿಸಿ ನಗರದ ಎಲ್ಲ ರಸ್ತೆಗಳಿಗೂ
ಈ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.