ಸಂಪ್ರದಾಯಿಕ ಮೀನುಗರಿಕೆ ಕ್ಲಿಕ್ : ಬರಪೂರ ಲೆಪ್ಪೆ ಮೀನು ಬಲೆಗೆ

ಸಂಪ್ರದಾಯಿಕ ಮೀನುಗಾರಿಕೆಯ ಚಿತ್ರಗಳು

ಕಾರವಾರ: ಸಮುದ್ರದ ಅಬ್ಬರದ ಅಲೆಗಳಿಂದ ನಿಂತೇ ಹೋಗಿದ್ದ ಸಂಪ್ರದಾಯಿಕ ಮೀನುಗಾರಿಕೆ ಗುರುವಾರ ಬೆಳಿಗ್ಗೆ ಕ್ಲಿಕ್ ಆಗಿತ್ತು. ಆಗಾಗ ಬೀಳುವ ಸಣ್ಣ ಮಳೆ ಮೋಡದ ಆಟದ ನಡುವೆಯೂ ಬಿಸಿಲು ಆಗಾಗ ಬಿದ್ದ ಕಾರಣ ಮೀನುಗಾರರು ಸಂಪ್ರದಾಯಿಕ ಮೀನುಗಾರಿಕೆ(ದಡದ ಮೀನುಗಾರಿಕೆ) ಮಾಡಿದರು. ಆಳ ಸಮುದ್ರದಿಂದ ಸಮುದ್ರದ  ದಡಕ್ಕೆ ಬಂದಿದ್ದ ಲೆಪ್ಪೆ ಮೀನು ಬರಪೂರವಾಗಿ ಬಲೆಗೆ ಬಿತ್ತು. ಲಕ್ಷಾಂತರ ರೂ. ಬೆಲೆಯ ಲೆಪ್ಪೆ ಮೀನು ಹೊತ್ತ ಬಂದ ಹತ್ತಾರು ಬೋಟ್ಗಳು ಕಾರವಾರದ ಅಲಿಗದ್ದಾ ಬೀಚ್ನಲ್ಲಿ ಲಂಗುರ ಹಾಕಿದವು. ಮೀನುಬೇಟೆ ಯಶಸ್ಸು ತಿಳಿದು ಜನರು ಮೀನು ಕೊಳ್ಳಲು ಮುಗಿ ಬಿದ್ದರು. ಬಲೆಯಿಂದ ಮೀನು ಬಿಡಿಸುತ್ತಿದ್ದಂತೆಯೇ ಜನರು ಮೀನು ಖರೀದಿಸಿ ಖುಷಿಯಿಂದ ಮನೆಗೆ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಂಪ್ರದಾಯಿಕ ಮೀನುಗಾರರಲ್ಲಿ ಸಂತಸದ ಗೆರೆ:

ಈ ವರ್ಷ ಮಳೆಗಾಲದಲ್ಲಿ ಮೊದಲ ಬಾರಿಗೆ ಮೀನು ಬಲೆಗೆ ಬಿದ್ದಿದೆ. ಸಂಪ್ರದಾಯಿಕ ಮೀನುಗಾರಿಕೆ ಮಾಡಲು ಈ ಬಾರಿ ಸಾಧ್ಯವೇ ಆಗಿಲ್ಲ. ಸಮುದ್ರ ಅಲೆಗಳು ಅಬ್ಬರಿಸುತ್ತಿವೆ. ಗಾಳಿ ಸಹ ಜೋರಾಗಿದೆ. ಹಾಗಾಗಿ ಸಂಪ್ರದಾಯಿಕ ದಡದ ಮೀನುಗಾರಿಕೆ ಸಾಧ್ಯವಾಗಿಲ್ಲ ಎಂದು ಥಾಕು ಹರಿಕಂತ್ರ ನೋವು ತೋಡಿಕೊಂಡರು. ಸಕರ್ಾರ ಮೀನುಗಾರರ ಸಾಲವನ್ನು ಮನ್ನ ಮಾಡಿಲ್ಲ. ಮೇ ಮಧ್ಯ ಭಾಗದಿಂದಲೇ ಮೀನು ಕ್ಷಾಮ ಇರುತ್ತದೆ. ಮಳೆಗಾಲದ 90 ದಿನ ಯಾಂತ್ರಿಕ ಮೀನುಗಾರಿಕೆಯ ಮೇಲೆ ನಿಷೇಧವಿದೆ. ಹಾಗಾಗಿ ಮಳೆಗಾಲದಲ್ಲಿ ಮೀನುಗಾರರ ಬದುಕು ಕಷ್ಟಕರವಾಗುತ್ತದೆ ಎಂದು ಅವರು ವಿವರಿಸಿದರು. 

ದಡದ ಮೀನುಗಾರಿಕೆಯಲ್ಲಿ ದೋಡಿ, ಬಂಗಡೆ, ಸ್ವರ, ಬಂಗಡೆ, ಲೆಪ್ಪೆ, ಸೀಗಡಿ, ಸಮದಾಳೆ ಹೇರಳವಾಗಿ ಬಲೆಗೆ ಬೀಳುತ್ತಿತ್ತು. ಈ ವರ್ಷ ಮಳೆ ಹೆಚ್ಚು. ಸಮುದ್ರ ಸಹ ಹುಚ್ಚೆದ್ದು ಕುಣಿಯುತ್ತಿದೆ. ಬ್ಯಾಲೆಯ ಮೇಲೆ ದೋಣಿ ನಿಲ್ಲುವಂತಹ ಸ್ಥಿತಿಯಿಲ್ಲ. ಸಮುದ್ರ ಕೊರೆತ. ಅಲೆಗಳು ಆಳೆತ್ತರಕ್ಕೆ ಮೇಲೇಳುತ್ತಿರುವ ಕಾರಣ ಪಾತಿ ದೋಣಿ, ಸಂಪ್ರದಾಯಿಕ ದೋಣಿಗಳು 1000 ದಿಂದ 2000 ಮೀಟರ್ ಸಹ ಸಮುದ್ರದಲ್ಲಿ ಚಲಿಸಲು ಸಾಧ್ಯವಾಗುತ್ತಿಲ್ಲ, ಹಾಗಾಗಿ ಬದುಕು ಕಷ್ಟಕರವಾಗಿದೆ ಎಂದು ಸಂಪ್ರದಾಯಿಕ ಮೀನುಗಾರರ ನಿರಾಶೆ ವ್ಯಕ್ತಪಡಿಸಿದರು.