ಜಮೈಕಾ, ಆ 31 ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅರ್ಗವಾಲ್ ಅವರು ಮೊದಲನೇ ದಿನ ಅಂತ್ಯಕ್ಕೆ ಭಾರತ ಸುಭದ್ರ ಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ (76 ರನ್) ಹಾಗೂ ಮಯಾಂಕ್ ಅರ್ಗವಾಲ್(55 ರನ್) ಅವರ ಅರ್ಧ ಶತಕಗಳ ಬಲದಿಂದ ಭಾರತ ಎರಡನೇ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಮೊದಲ ದಿನದ ಮುಕ್ತಾಯಕ್ಕೆ ಗೌರವ ಮೊತ್ತ ಕಲೆಹಾಕಿದೆ. ಆತಿಥೇಯರ ಪರ ಜೇಸನ್ ಹೋಲ್ಡರ್ ಮೂರು ವಿಕೆಟ್ ಪಡೆದಿದ್ದಾರೆ.
"ಮೊದಲ ಅವಧಿಯಲ್ಲಿ ಕೇಮರ್ ರೋಚ್ ಹಾಗೂ ಜೇಸನ್ ಹೋಲ್ಡರ್ ಎಸೆತಗಳು ಪರಿಣಾಮಕಾರಿ ಜಾಗದಲ್ಲಿ ಬೀಳುತ್ತಿದ್ದವು. ಈ ಎಸೆತಗಳನ್ನು ಎದುರಿಸುವುದು ಸುಲಭವಾಗಿರಲಿಲ್ಲ. ಪಿಚ್ನ ಕೆಲ ಭಾಗದಲ್ಲಿ ತೇವವಿದ್ದ ಕಾರಣ ಬ್ಯಾಟಿಂಗ್ ಮಾಡುವುದು ಕಷ್ಟವಾಗಿತ್ತು ಎಂದು ಮೊದಲ ದಿನದ ಬಳಿಕ ಮಯಾಂಕ್ ಅರ್ಗವಾಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
"ನನಗೆ ಅನಿಸಿದ ಹಾಗೆ ಜೇಸನ್ ಹೋಲ್ಡರ್ ಅವರು ಅತ್ಯುತ್ತಮವಾದ ಸ್ಥಳದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಅವರು ಚೆಂಡು ಎಸೆಯುತ್ತಿದ್ದ ಜಾಗದಲ್ಲಿ ಕೊಂಚ ತೇವವಿದ್ದ ಪರಿಣಾಮ ಬ್ಯಾಟಿಂಗ್ಗೆ ತುಸು ಕಠಿಣವಾಗುತ್ತಿತ್ತು. ಈ ವೇಳೆ ರನ್ ಗಳಿಸುವುದು ಕಷ್ಟವಾಗಿತ್ತು" ಎಂದು ಹೇಳಿದರು.
" ಆರಂಭದಲ್ಲಿ ಹೆಚ್ಚಿನ ಒತ್ತಡವಿತ್ತು. ರನ್ ಗಳಿಸುವುದು ಕಷ್ಟವಾಗಿತ್ತು. ಮೊದಲ ಸ್ಪೆಲ್ನಲ್ಲಿ ಆರು-ಏಳು ಓವರ್ಗಳಲ್ಲಿ ಮೂರು ಅಥವಾ ನಾಲ್ಕು ಓವರ್ಗಳು ಮೆಡಿನ್ ಆಗಿದ್ದವು. ಈ ವೇಳೆ ರನ್ ಗಳಿಕೆಗೆ ಕಡಿವಾಣ ಬಿದ್ದಿತ್ತು" ಎಂದು ತಿಳಿಸಿದರು.
ಆದರೂ, ನಾವು ಮೊದಲ ದಿನದ ಮುಕ್ತಾಯಕ್ಕೆ ಐದು ವಿಕೆಟ್ ಕಳೆದುಕೊಂಡರೂ ಪ್ರಥಮ ಇನಿಂಗ್ಸ್ನಲ್ಲಿ ಉತ್ತಮ ರನ್ ಕಲೆಹಾಕಿ ಸುಭದ್ರ ಸ್ಥಿತಿಯಲ್ಲಿದ್ದೇವೆ. ನಮ್ಮ ಆಟಗಾರರಿಂರ ಉತ್ತಮ ಪ್ರದರ್ಶನ ಮೂಡಿ ಬಂದಿದೆ ಎಂದು ಮಯಾಂಕ್ ಅರ್ಗವಾಲ್ ನುಡಿದರು.