ಕಲಬುರಗಿ, ನ. 21 :ಕಲಬುರಗಿ ವಿಮಾನ ನಿಲ್ದಾಣ ಶುಕ್ರವಾರ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಕಲಬುರಗಿಯಲ್ಲಿ ಮೊದಲ ಪ್ರಯಾಣಿಕ ವಿಮಾನ ಸಂಚಾರಕ್ಕೆ ಚಾಲನೆ ದೊರೆಯಲಿದೆ.
ಸ್ಟಾರ್ ಏರ್ ಲೈನ್ಸ್ ಮೊದಲ ವಿಮಾನ ನಾಳೆ ಮಧ್ಯಾಹ್ನ 1-30 ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಬೆಂಗಳೂರಿನಿಂದ ಅದೇ ವಿಮಾನದಲ್ಲಿ ಆಗಮಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿ ಹಲವು ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
40 ನಿಮಿಷ ಕಾಲ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅದೇ ವಿಮಾನದ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರು ಬೆಂಗಳೂರಿಗೆ ತೆರಳಲಿದ್ದಾರೆ.
ನಾಳೆ ಉದ್ಘಾಟನೆ ಹಿನ್ನೆಲೆಯಲ್ಲಿ ಇಂದು ವಿಮಾನ ನಿಲ್ದಾಣಕ್ಕೆ ಆಗಮಿಸಿ ಉದ್ಘಾಟನಾ ಸಮಾರಂಭದ ಸಿದ್ಧತೆಯನ್ನು ಸಂಸದ ಡಾ. ಉಮೇಶ ಜಾಧವ್ ಪರಿಶೀಲಿಸಿದರು. ಲೋಹದ ಹಕ್ಕಿಯಲ್ಲಿ ನಾಳೆ ಸಾಮಾನ್ಯ ಜನರಿಗೂ ಹಾರಲು ಅವಕಾಶವಿದೆ.