ಅಹಮದಾಬಾದ್ 13: ನಿನ್ನೆ ಪತನಗೊಂಡ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್ಲೈನರ್ ವಿಮಾನದ ಬ್ಲ್ಯಾಕ್ ಬಾಕ್ಸ್ ಇಂದು ಪತ್ತೆಯಾಗಿದೆ.
ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ ಏರ್ ಇಂಡಿಯಾ ವಿಮಾನ ಪತನವಾಗಿದ್ದು, ಒಬ್ಬ ಪ್ರಯಾಣಿಕ ಹೊರತುಪಡಿಸಿ ಉಳಿದ ಎಲ್ಲಾ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 265 ಜನ ಮೃತಪಟ್ಟಿದ್ದಾರೆ.
ಮೂಲಗಳ ಪ್ರಕಾರ, ನಾಗರಿಕ ವಿಮಾನಯಾನ ನಿರ್ದೇಶನಾಲಯದ ತಂಡ ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಜನದಟ್ಟಣೆಯ ಮೇಘನಿನಗರ ಪ್ರದೇಶದಲ್ಲಿ ಒಂದು ಬ್ಲ್ಯಾಕ್ ಬಾಕ್ಸ್ ವಶಪಡಿಸಿಕೊಂಡಿದೆ. ಇಲ್ಲಿಯೇ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನ ಪತನಗೊಂಡಿತ್ತು.
ಬ್ಲ್ಯಾಕ್ ಬಾಕ್ಸ್ ವಿಮಾನ ಹಾರಾಟದ ಸಮಯದಲ್ಲಿ ವಿಮಾನದ ಬಗ್ಗೆ ಮಾಹಿತಿಯನ್ನು ದಾಖಲಿಸುವ ಒಂದು ಸಣ್ಣ ಸಾಧನವಾಗಿದೆ. ಇದು ವಿಮಾನ ಅಪಘಾತಗಳ ತನಿಖೆಗೆ ಸಹಾಯ ಮಾಡುತ್ತದೆ.