ಚೀನಾ ಸೇರಿದಂತೆ ಆರು ವಾಲಿಬಾಲ್ ತಂಡಗಳಿಗೆ ಟೋಕಿಯೊ ಒಲಿಂಪಿಕ್ಸ್ ಟಿಕೆಟ್

ಬೀಜಿಂಗ್, ಆ 5 (ಕ್ಸಿನ್ಹುವಾ) ಮುಂಬರುವ 2020 ಟೋಕಿಯೊ ಒಲಿಂಪಿಕ್ಸ್ ವಾಲಿಬಾಲ್ ಸ್ಪರ್ದೆಗೆ ಚೀನಾ ಸೇರಿದಂತೆ ಸರ್ಬಿಯಾ, ಇಟಲಿ, ಬ್ರೆಜಿಲ್, ರಷ್ಯಾ, ಅಮೆರಿಕ ಹಾಗೂ ಆತಿಥೇಯ ಜಪಾನ್ ತಂಡಗಳು ಸೇರಿ ಒಟ್ಟು ಆರು ತಂಡಗಳು ಅರ್ಹತೆ ಪಡೆದಿವೆ.    ಭಾನುವಾರ ನಡೆದ ಎಫ್ಐವಿಬಿ ವಾಲಿಬಾಲ್ ಒಲಿಂಪಿಕ್ಸ್ ಅರ್ಹತಾ ಟೂರ್ನಿಯ ಬಿ ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಸರ್ಬಿಯಾ ತಂಡ ಪೊಲೆಂಡ್ ತಂಡವನ್ನು ಮಣಿಸುವ ಮೂಲಕ ನಾಲ್ಕನೇ ಬಾರಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಯಿತು. ಎಫ್ ಗುಂಪಿನ ಪಂದ್ಯದಲ್ಲಿ ಇಟಲಿ ತಂಡ ನೇದ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಅಂತಿಮ ಹಂತದಲ್ಲಿ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿತು. ಚೀನಾ ತಂಡ ಬಿ ಗುಂಪಿನ ಪಂದ್ಯದಲ್ಲಿ ಟರ್ಕಿ ವಿರುದ್ಧ 3-0 ಅಂತರದಲ್ಲಿ ಗೆದ್ದು ಒಲಿಂಪಿಕ್ಸ್ ಟಿಕೆಟ್ ಪಡೆಯಿತು. ಬ್ರೆಜಿಲ್ ಹಾಗೂ ರಷ್ಯಾ ತಂಡಗಳು ಐದು ಸೆಟ್ಗಳಲ್ಲಿ ಗೆದ್ದರೆ, ಅಮೆರಿಕ ಗುಂಪು ಸಿ ನಲ್ಲಿ ಅಗ್ರ ಸ್ಥಾನ ಪಡೆಯುವ ಮೂಲಕ ಒಲಿಂಪಿಕ್ಸ್ ಗೆ ಅರ್ಹತೆ ಪಡೆಯಿತು.      ಒಲಿಂಪಿಕ್ಸ್  ಅರ್ಹತಾ ಸುತ್ತಿನ ಟೂರ್ನಿಯ ಪಂದ್ಯದಲ್ಲಿ ಒಟ್ಟು 24 ತಂಡಗಳನ್ನು ಆರು ಗುಂಪುಗಳಾಗಿ ವಿಂಗಡಿಸಿ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಎಲ್ಲ ಹಂತದ ಗುಂಪುಗಳಲ್ಲಿ ಗೆದ್ದ ತಂಡಗಳು ಅರ್ಹತೆ ಪಡೆದವು. ಆದರೆ, ಜಪಾನ್ ಒಲಿಂಪಿಕ್ಸ್ ಆತಿಥ್ಯ ವಹಿಸಿಕೊಂಡಿದ್ದರಿಂದ ನೇರವಾಗಿ ಅರ್ಹತೆ ಪಡೆಯಿತು.