ಇಂದು ರೈತ ಆತಂಕದಲ್ಲೇ ಬದುಕುತ್ತಿದ್ದಾನೆ: ಇಸ್ರಣ್ಣವರ

ಧಾರವಾಡ 25: ರೈತ ಇಂದು ಎಲ್ಲ ರೀತಿಯಲ್ಲೂ ಆತಂಕಕ್ಕೆ ಒಳಗಾಗುತ್ತಿದ್ದಾನೆ. ಬಿತ್ತಬೇಕಾದರೆ ಮಳೆಯಾಗುವುದೋ ಇಲ್ಲೋ ಎಂಬ ಆತಂಕ. ಬೆಳೆಬಂದರೆ ಬೆಲೆ ಸಿಗುತ್ತದೋ ಇಲ್ಲೋ ಎಂಬ ಆತಂಕ, ಒಕ್ಕಲುತನ ಮಾಡುವ ಗಂಡುಮಕ್ಕಳು ಮದುವೆ ವಯಸ್ಸಿಗೆ ಬಂದರೆ ಹೆಣ್ಣು ಸಿಗುವ ಬಗ್ಗೆ ಆತಂಕ, ಕೃಷಿಗೆ ಸಾಲ ಸೋಲ ಮಾಡಿ  ಹಗಲಿರುಳು ದುಡಿದರೂ ಜೀವನ ಸಾಗಿಸಿ ಸಾಲ ಮರುಪಾವತಿ ಮಾಡಲಾಗುತ್ತದೋ ಇಲ್ಲವೋ, ಸಾಲದ ಸುಳಿಗೆ ಸಿಲುಕಿ ಹೊರಬರಲಾಗದ ಆತಂಕ ಹೀಗೆ ಹಲವು ರೀತಿಯಲ್ಲಿ ರೈತಾಪಿ ವರ್ಗ ಒಂದು ರೀತಿಯಲ್ಲಿ ಆತಂಕದಲ್ಲಿ ಬದುಕು ನಡೆಸುತ್ತಿದ್ದಾರೆ ಎಂದು ಪ್ರಗತಿಪರ ರೈತ ಕಮಲಾಪುರದ ಮಲ್ಲೇಶಪ್ಪ ಇಸ್ರಣ್ಣವರ ಹೇಳಿದರು.

ಅವರು ಗುಬ್ಬಚ್ಚಿ ಗೂಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ರೈತರ ದಿನದ ಆಚರಣೆಯ ಅಂಗವಾಗಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. 

ಇಂದಿನ ಶಿಕ್ಷಣ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಮನುಷ್ಯನ ಮೆದುಳಿನ ಮೇಲೆ ಅಲ್ಲ. ರೈತರು ಸರಿಯಾದ ಶಿಕ್ಷಣ ಪಡೆಯದಿದ್ದರೂ ಸ್ಮರಣ ಶಕ್ತಿಹೊಂದಿರುತ್ತಾನೆ. ಎಲ್ಲ ವ್ಯವಹಾರವನ್ನು ಸ್ಮರಣೆಯಲ್ಲಿ ಇಟ್ಟುಕೊಂಡು ಕಂಪ್ಯೂಟರ್, ಕ್ಯಾಲ್ಕುಲೇಟರ್ಗಿಂತ ವೇಗವಾಗಿ ಲೆಕ್ಕವನ್ನು ಮಾಡುವ ಜಾಣ್ಮೆಯನ್ನು ರೈತವರ್ಗ ಇಂದಿಗೂ ಹೊಂದಿದ್ದಾರೆ. ವ್ಯವಹಾರಿಕ ಜ್ಞಾನ ಅವರಿಗಿದ್ದಷ್ಟು ಉನ್ನತ ಶಿಕ್ಷಣ ಪಡೆದವರಲ್ಲಿ ಇರುವುದಿಲ್ಲ. ಅವರು ಏನಿದ್ದರೂ ಕೈಯಲ್ಲಿಯ ಮೊಬೈಲನ್ನು ಅವಲಂಬಿಸಿರುತ್ತಾರೆ. ನಿಸರ್ಗದಲ್ಲಿಯ ಬದಲಾವಣೆಗಳನ್ನು ಯಾವ ಲೆಕ್ಕಾಚಾರವಿಲ್ಲದೇ ಹೇಳುವ ಜ್ಞಾನವನ್ನು ರೈತವರ್ಗ ಮಾತ್ರ ಹೊಂದಿದೆ. ಯಾವ ದಿನ ಯಾವ ಮಳೆ ಪ್ರಾರಂಭವಾಗುತ್ತದೆ ಹೇಳುವುದಲ್ಲದೇ ನಾಳೆ ಮಳೆಯಾಗುತ್ತಿದ್ದರೆ ಇಂದೇ ಹೇಳುವ ಕುಶಲತೆಯನ್ನು ರೈತರು ಹೊಂದಿದ್ದು, ಇಂಥ ಜ್ಞಾನದ ಸದ್ಬಳಕೆ ಸರಿಯಾಗಿ ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ರೈತ ಶ್ರಮಿಕಜೀವಿ. ಆತನಿಗೆ ರಜೆ ವಿಶ್ರಾಂತಿ ಎಂಬುದೇ ಇಲ್ಲ. ಸೂರ್ಯ ಉದಯದೊಂದಿಗೆ ಆತನ ಕೆಲಸ ಹೊಲದಲ್ಲಿ ಆರಂಭ. ಆದರೆ ಇಂದಿನ ಯುವ ಪೀಳಿಗೆ ಮಣ್ಣಿಗೆ ಬೆನ್ನು ತೋರಿಸುತ್ತಿದ್ದು, ಕೃಷಿ ಎಂದರೆ ಅಸಡ್ಡೆ ಮಾಡಿ ಕೀಳೆ ಎಂಬಂತೆ ಕಾಣಲಾಗುತ್ತಿದೆ. ಮುಂದೊಂದು ದಿನ ಎರಡು ಎಕರೆ ಹೊಲ ಇದ್ದವನೇ ಶ್ರೀಮಂತ ಎನ್ನುವ ಕಾಲಬರುವುದು ದೂರವಿಲ್ಲ ಎಂದರು.

ಶಾಲೆಯ ಅಧ್ಯಕ್ಷ ಶಂಕರ ಹಲಗತ್ತಿ ಅಧ್ಯಕ್ಷತೆ ವಹಿಸಿಕೊಂಡು, ರೈತರು, ರುಮಾಲು, ಹೆಗಲಮೇಲೆ ಟವಲು, ತಲೆಯಮೇಲೆ ಟೊಪ್ಪಿಗೆ ಪಂಜೆ ಯಾಕೆ ತೊಡುತ್ತಾರೆ ಎಂಬುದರ ಬಗ್ಗೆ ಮಕ್ಕಳಿಗೆ ಸರಳ ಭಾಷೆಯಲ್ಲಿ ಹೇಳಿ ರೈತರ ಶ್ರಮಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸಿದರು. 

ಜಯಶ್ರೀ ಚಿನಗುಡಿ ಕಾರ್ಯಕ್ರಮ ನಡೆಸಿಕೊಟ್ಟರು. ವಿಜಯಲಕ್ಷ್ಮಿ ಗೊಡಚಿಮಠ ಸ್ವಾಗತಿಸಿ ವಂದಿಸಿದರು. ಲತಾ ಹನಮನಹಳ್ಳಿ ರೈತಗೀತೆಯನ್ನು ಹೇಳಿದರು. ಶಾಲೆಯ ಮಕ್ಕಳು ಪ್ರಾರ್ಥನಾ ಗೀತೆಯನ್ನು ಹಾಡಿದರು. ಭಾರತಿ ಸಾಬಳೆ, ಶುಭಾ ದೊಡಮನಿ, ಗೀತಾ ಬೈಲವಾಡ, ವೀಣಾ ನಿಡಗುಂದಿ, ಜ್ಯೋತಿ ಜಾಧವ, ಲಕ್ಷ್ಮಿ ಜಾಧವ ಕಾರ್ಯಕ್ರಮ ಸಂಘಟಿಸಿದರು.