ಇಂದು ಅಂಬಿಗರ ಚೌಡಯ್ಯನವರ ಜಯಂತ್ಯೋತ್ಸವ

ರಾಣೇಬೆನ್ನೂರು13: ತಾಲೂಕಿನ ಚೌಡಯ್ಯದಾನಪುರದಲ್ಲಿ ಮಕರ ಸಂಕ್ರಾಂತಿಯ ನಿಮಿತ್ಯ ಲಿಂ. ಶ್ರೀ ವಿರುಪಾಕ್ಷ ಒಡೆಯರವರ ಸ್ಮರಣೋತ್ಸವ ಹಾಗೂ ಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವು ಮತ್ತು ನಾಲ್ವತ್ತವಾಡದ ಶರಣ ವಿರೇಶ್ವರರ ಪುರಾಣ ಮಂಗಲೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಒಡೆಯರ ಚಿತ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜ.14 ರಂದು ಜರುಗಲಿವೆ.

  ಅಂದು ಬೆ.8 ಗಂಟೆಗೆ ಶ್ರೀವಿರುಪಾಕ್ಷ ಒಡೆಯರ ಹಾಗೂ ಶರಣ ಅಂಬಿಗರ ಚೌಡಯ್ಯನವರ ಮತ್ತು ಶ್ರೀ ಶಿವದೇವಮುನಿಗಳ ಭಾವಚಿತ್ರದ ಮೆರವಣಿಗೆ ಹಾಗೂ ಕುಂಭಮೇಳವು ಸಕಲ ವಾದ್ಯಗಳೊಂದಿಗೆ ಒಡೆಯರ ಸಂಸ್ಥಾನಮಠದಿಂದ ಪ್ರಾರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತುಂಗಭದ್ರ ನದಿಯ ತಟದಲ್ಲಿರುವ ಶರಣ ಅಂಬಿಗರ ಚೌಡಯ್ಯನವರ ಐಕ್ಯಮಂಟಪಕ್ಕೆ ತಲುಪಿ ವಿವಿಧ ಧಾರ್ಮಿಕ  ಪೂಜಾ ಪುನಸ್ಕಾರಗಳೊಂದಿಗೆ ಕುಂಭಾಭಿಷೇಕ ನಡೆಯುವುದು.

    ನಂತರ ಶ್ರೀಗಳ ಮಠದಲ್ಲಿ ಪುರಾಣ ಮಂಗಲೋತ್ಸವ ಹಾಗೂ ವೇದಿಕೆ ಕಾರ್ಯಕ್ರಮ ನಡೆಯುವುದು. ನಾಡಿನ ಹರ-ಗುರು-ಚರಮೂರ್ತಿಗಳು, ಶರಣರ ತತ್ವಾನುಯಾಯಿಗಳು, ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ ಮಹಾಪ್ರಸಾದ ನಡೆಯುವುದು ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.