ಬೆಂಗಳೂರು, ಆ 26 ಉಪ ಮುಖ್ಯಮಂತ್ರಿ ಹುದ್ದೆ ಹಾಗು ಯಾರಿಗೆ ಯಾವ ಖಾತೆ ಎಂಬುದರ ಬಗ್ಗೆ ಇಂದೇ ನಿರ್ಧಾರವಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಖಾತೆ ಹಂಚಿಕೆ ನಡೆಯಲಿದೆ. ಒಂದು ವೇಳೆ ಇಂದು ಈ ಕಾರ್ಯ ಪೂರ್ಣಗೊಳ್ಳದೇ ಇದ್ದಲ್ಲಿ ನಾಳೆ ಖಾತೆ ಹಂಚಿಕೆ ಹಾಗು ಡಿಸಿಎಂ ಹುದ್ದೆ ಬಗ್ಗೆ ಗೊತ್ತಾಗಲಿದೆ ಎಂದು ಹೇಳಿದರು.
ಇಂದು ಖಾತೆ ಹಂಚಿಕೆ ಪಟ್ಟಿ ರಾಜ್ಯಪಾಲರಿಗೆ ಕಳುಹಿಸಲಾಗುತ್ತಿದೆ. ಸಂಜೆ ಒಳಗೆ ಖಾತೆ ಹಂಚಿಕೆ ಆಗುತ್ತದೆ, ಡಿಸಿಎಂ ಹುದ್ದೆ ಯಾರಿಗೆ ಕೊಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದು ಹೇಳಿದರು.
ಉತ್ತರ ಕರ್ನಾಟಕದಲ್ಲಿ ಸಂಭವಿಸಿರುವ ಪ್ರವಾಹದ ಬಗ್ಗೆ ಪ್ರತಿಕ್ರಿಯಿಸಿ, " ನೆರೆ ಅಧ್ಯಯನ ಮಾಡಲು ಕೇಂದ್ರದ ತಂಡ ಆಗಮಿಸಿದೆ. ಇನ್ನೆರಡು ದಿನಗಳಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಸಲಿದೆ. ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ಸಿಗುವ ವಿಶ್ವಾಸವಿದೆ ಎಂದರು.
ಹಲವು ರಾಜ್ಯಗಳಲ್ಲಿ ನೆರೆ ಇದ್ದರೂ ನಮ್ಮ ರಾಜ್ಯಕ್ಕೆ ನೆರೆ ಅಧ್ಯಯನ ತಂಡ ಮೊದಲು ಬಂದಿದೆ. ಈ ಬಗ್ಗೆ ಸಿದ್ದರಾಮಯ್ಯ ಮಾತಿಗೆ ಉತ್ತರ ನೀಡುವುದಿಲ್ಲ. ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ.
ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗುವ ಅವಶ್ಯಕತೆ ಇಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.