ಎಷ್ಟೇ ಅಡೆತಡೆ ಇದ್ದರೂ ಟಿಪ್ಪು ಜಯಂತಿ ಆಚರಣೆ : ಹಜ್ರತ್ ಟಿಪ್ಪು ಸುಲ್ತಾನ್ ಸಂಯುಕ್ತ ರಂಗ

ಬೆಂಗಳೂರು, ನ 5:   ಟಿಪ್ಪು ಸುಲ್ತಾನ್ ಕುರಿತ ಪಾಠವನ್ನು ಶಾಲಾ- ಕಾಲೇಜು ಪಠ್ಯದಿಂದ ತೆಗೆದು ಹಾಕಲಾಗುವುದು ಎಂದು ಬಿಜೆಪಿ ನೇತೃತ್ವದ ರಾಜ್ಯ ಸರಕಾರ ಹೇಳಿರುವುದನ್ನು ಹಜ್ರತ್ ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಖಂಡಿಸಿದೆ.   

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಸಂಘಟನೆಯ ಅಧ್ಯಕ್ಷ ಸರ್ದಾರ್ ಅಹಮದ್ ಖುರೇಶಿ, ಟಿಪ್ಪು ಸುಲ್ತಾನ್ ಧೀಮಂತ ದೇಶಾಭಿಮಾನಿ. ಸರ್ವ ಜನರ ಹಿತರಕ್ಷಕ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೋರಾಟಗಾರ ಎಂದರು.  

ನಾಡಿಗೆ ಟಿಪ್ಪು ಕೊಡುಗೆ ಅಪಾರ. ಅಂತಹ ವ್ಯಕ್ತಿಯ ಇತಿಹಾಸವನ್ನು ಶಾಲಾ ಪಠ್ಯದಿಂದ ತೆಗೆಯುತ್ತಿರುವುದು ಬೇಸರದ ಸಂಗತಿಯಾಗಿದ್ದು, ಇದನ್ನು ಸಂಘಟನೆ ಖಂಡಿಸುತ್ತದೆ ಎಂದು ಅವರು ಹೇಳಿದರು.

ಇತಿಹಾಸದ ಪಠ್ಯಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಕುರಿತು ವಿಷಯಗಳು ಇರಬಾರದು ಎಂದು ಯೋಜಿಸಿದರೆ ಅದು ಮೂರ್ಖತನದ ಪರಮಾವಧಿ ಎಂದು ಅವರು ಅಭಿಪ್ರಾಯಪಟ್ಟರು.   

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಆದರೆ ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪ ಅವರನ್ನೇ ಆಹ್ವಾನಿಸಿಲ್ಲ ಎಂದು ತಿಳಿಸಿದ ಅವರು,   

ಪಠ್ಯಕ್ರಮದಿಂದ ಟಿಪ್ಪು ವಿಷಯವನ್ನು ತೆಗೆದುಹಾಕಬಾರದು ಎಂದು ಒತ್ತಾಯಿಸಿದರು.   

ಈಗಾಗಲೇ ಟಿಪ್ಪು ಜಯಂತಿ ರದ್ದತಿ ಕುರಿತು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ. ಬಿಜೆಪಿ ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುವುದನ್ನು ನಿಲ್ಲಿಸಲು ಆಗ್ರಹಿಸಿದೆ. ಆದರೆ  ನ 10 ರಂದು ಟಿಪ್ಪು ಜನ್ಮದಿನವಾದ್ದರಿಂದ ಅಂದು ಟಿಪ್ಪು ಜಯಂತಿ ಆಚರಿಸುವುದಾಗಿ ಅವರು ಹೇಳಿದರು.