ಕಾಲಮಾನಗಳು ಸರಿದದ್ದೆ ತಿಳಿಯುವುದಿಲ್ಲ. ಕ್ಷಣಕ್ಷಣವೂ ಕಾಲನ ಓಟ ನಡೆಯುತ್ತಲೇ ಇರುತ್ತದೆ. ಆದರೆ ನಮ್ಮ ಗಮನಕ್ಕೆ ಬರುವುದು ದಿನ ಕಳೆದ ಮೇಲೆ, ವಾರವಾಯಿತು ಎಂದು, ತಿಂಗಳು ಮುಗಿದೇ ಹೋಯಿತೆಂದು, ಹೊಸ ವರ್ಷ ಬಂತೆಂದು. ನಾಳೆ ನಮಗಾಗಿ ಇದೆ ಎನ್ನುವ ಬದುಕು ನಮ್ಮದು, ನಾಳೆ ಎನ್ನುವುದು ನಿನ್ನೆ ಆಗಿ ಇತಿಹಾಸದ ಪುಟ ಸೇರಿ ಹೋಗುವುದು ಎನ್ನುವ ವಾಸ್ತವ ತಿಳಿದಿದ್ದರೂ ಸಹ ಅದರತ್ತ ನಮ್ಮ ಗಮನವೇ ಇಲ್ಲ. ಇತಿಹಾಸ ಪುಟ ಸೇರುವ ಆ ದಿನವನ್ನು ನಾವು ಸವಿಯಾಗಿ ನೆನಪಲ್ಲಿ ಇಟ್ಟುಕೊಳ್ಳುವ ದಿನವಾಗಿಸಿಕೊಳ್ಳುವ ದಿನವಾಗಲಿ ಎನ್ನುವ ದಿಕ್ಕನ್ನು ಸಹ ಆಯ್ದುಕೊಳ್ಳದಷ್ಟು ಮುಗ್ದರಂಥಹ ಮುಖವಾಡ ಹಾಕಿಬಿಡುವುದು ವಿಪರ್ಯಾಸ.
ಹೊಸ ವರ್ಷ ಬಂತೆಂದರೆ ಒಂದಷ್ಟು ಸಂಭ್ರಮ, ಖುಷಿ, ಆಚರಣೆ, ಉಲ್ಲಾಸ ತುಂಬಿಕೊಂಡು ಏನನ್ನೋ ಮಾಡಿ ಬಿಡುತ್ತೇವೆ ಎನ್ನುವ ಕನಸು ಎಲ್ಲವೂ ನಮ್ಮನ್ನು ಆವರಿಸುತ್ತದೆ. ಆದರೆ ಅದೇ ಹೊಸವರ್ಷದ ಜನೆವರಿ ಎರಡನೇ ತಾರೀಖು ಬಂದರೆ ಮತ್ತೆ ಯಥಾಪ್ರಕಾರ ಹಳೆಯ ಚಾಳಿಯನ್ನೇ ಮುಂದುವರೆಸುತ್ತೇವೆ. ಯಾಕೆ ಹೀಗೆ ಅಂಥ ಯೋಚಿಸುವಾಗಲೆಲ್ಲ ನಮ್ಮ ಆಲಸ್ಯ ಎದ್ದು ಕಾಣಿಸುತ್ತದೆ.
ನನ್ನ ಗುರುಗಳು ಒಂದು ಮಾತು ಹೇಳುತ್ತಿದ್ದರು. ಆಲಸ್ಯ ಅಂತ ಬಂದಾಗ ಸುಮ್ಮನೆ ಮಲಗಿಬಿಡಿ. ಮಲಗುವಾಗ ಪಕ್ಕದಲ್ಲಿ ಒಂದೇ ಮಾತರಂ, ನನ್ನ ದೇಶ ನನ್ನ ಜನ ನನ್ನ ಮಾನ ಪ್ರಾಣ ಘನ, ಹಚ್ಚೇವು ಕನ್ನಡದ ದೀಪ ಹಾಡನ್ನು ಹಚ್ಚಿಕೊಳ್ಳಿ. ನಿಮಗೆ ಸಿನೆಮಾ ಹಾಡು ಬೇಕೆನ್ನಿಸಿದರೆ ಹಿಂದೂಸ್ಥಾನವು ಎಂದು ಮರೆಯದ ಭಾರತ ರತ್ನವೂ ನೀನಾಗು ಈ ಹಾಡನ್ನು ಕೇಳಿ. ಈ ಹಾಡುಗಳಲ್ಲಿ ಯಾವುದದರೂ ಒಂದು ಹಾಡು ಕೇಳುತ್ತಿದ್ದಂತೆ ನಿಮ್ಮಲ್ಲಿ ಒಂದು ಸಂಚಲನ ಸೃಷ್ಟಿಯಾಗುತ್ತದೆ. ಆ ಹಾಡು ಕೇಳಿ ಮುಗಿಸುವಷ್ಟರಲ್ಲಿ ಎದ್ದು ಕುಳಿತಿರುತ್ತಿರಿ. ನಂತರದಲ್ಲಿ ನಿಮಗೆ ಮಲಗಬೇಕು ಅನ್ನಿಸುವುದೇ ಇಲ್ಲ. ಎಚ್ಚರವಾಗಿ ಬಿಡುತ್ತೀರಿ. ಆ ಹಾಡು ಕೇಳಿಯೂ ನೀವು ಮಲಗುತ್ತೀರಿ ಅಂದರೆ ನೀವು ಸದಾ ಮಲಗಿಯೇ ಉಳಿಯುವವರು ಎಂದರ್ಥ. ಮತ್ತೆ ಏನೋ ಸಾಧಿಸಿಬಿಡುತ್ತೇನೆ ಎಂದು ಯೋಚಿಸುವುದನ್ನೇ ಮರೆತುಬಿಡಿ ಎಂದಿದ್ದರು. ಇದನ್ನು ಸಾಕಷ್ಟು ಸಲ ಸ್ವತಹಃ ನಾನೇ ಪ್ರಯೋಗಕ್ಕೆ ಒಡ್ಡಿಕೊಂಡಿದ್ದು ಇದೆ.
ಎಲ್ಲರೂ ಹೆಸರಾಂತರಾಗಿ ದೇಶವೇ ಗುರುತಿಸುವಷ್ಟು ದೊಡ್ಡ ಹೆಸರನ್ನು ಗಳಿಸಲಾಗುತ್ತದೆ ಎಂದಿಲ್ಲ. ಆದರೆ ಅಸಾಧ್ಯವೂ ಅಲ್ಲ. ನಾವು ಎಲ್ಲಿ ನೆಲೆ ನಿಂತಿದ್ದೇವೆಯೋ ಆ ಜಾಗದಲ್ಲಿಯಾದರೂ ನಾವು ವಿಭಿನ್ನವಾಗಿ ಕಾಣಿಸಿಕೊಳ್ಳಬೇಕು ಎನ್ನುವ ತುಡಿತ ಇರಬೇಕು. ಒಂದು ಮನೆಯ ಹೆಸರು ಮಾತಿಗೆ ಸಿಕ್ಕರೆ ಓ ಆ ಮನೆಯ, ಆ ಮನೆಯ ಅಕ್ಕ ಗುಲಾಬಿ ಗಿಡಗಳನ್ನು ಚೆನ್ನಾಗಿ ಬೆಳೆಸುತ್ತಾರೆ. ವಿವಿಧ ಜಾತಿಯ ಗುಲಾಬಿ ಹೂಗಳು ಇದ್ದಾವೆ. ನೋಡಲಿಕ್ಕೆ ಬಹಳ ಸುಂದರ ಎನ್ನುವ ಮಾತು ಸಾರ್ಥಕ ಭಾವ ಹುಟ್ಟು ಹಾಕುತ್ತದೆ. ಅದೆಷ್ಟೋ ಜನ ತಮ್ಮ ಮಾತಿನಿಂದ ಸುತ್ತಲಿನವರ ಮುಖದಲ್ಲಿ ನಗುವನ್ನು ಮೂಡಿಸುತ್ತಾರೆ. ಆ ವ್ಯಕ್ತಿಗೆ ಏನೇ ಕೆಲಸ ಹೇಳಿ ಇಲ್ಲ ಎನ್ನುವುದಿಲ್ಲ. ಕಷ್ಟವೋ ಸುಖವೋ ಪ್ರಯತ್ನ ಪಡುತ್ತಾರೆ ಎನ್ನುವ ಮಾತನ್ನು ಸಾಕಷ್ಟು ಬಾರಿ ನಾವು ಕೆಲವರ ವಿಚಾರದಲ್ಲಿ ಕೇಳಿಸಿಕೊಳ್ಳುತ್ತೇವೆ. ಇದಕ್ಕೂ ಮುಂದೆ ಹೋಗಿ ಕೆಲವರು ಒಂದು ಗುರಿಯನ್ನು ಇಟ್ಟುಕೊಂಡು ಅ ಗುರಿ ತಲುಪಲು ಸಾಕಷ್ಟು ಶ್ರಮ ವಹಿಸುತ್ತಾರೆ. ಆ ಶ್ರಮದ ಫಲವಾಗಿ ಜನಸಾಮಾನ್ಯರ ಮನದಲ್ಲಿ ಉಳಿಯುತ್ತಾರೆ. ಆದರೆ ಕೆಲವೇ ಕೆಲವು ಜನ ಮಾತ್ರ ಯಾವುದೇ ಸಾಧನೆಗೋ, ಪ್ರಶಸ್ತಿಗೋ, ಹಣ, ಹೆಸರು ಸಂಪಾದಿಸಲೋ ಕೆಲಸ ಮಾಡುವುದೇ ಇಲ್ಲ. ಕಾಯಕವೇ ಕೈಲಾಸ ಎಂದು ತಮ್ಮ ಪಾಡಿಗೆ ದುಡಿಯುತ್ತಲೇ ಇರುತ್ತಾರೆ. ದೊಡ್ಡ ವ್ಯಕ್ತಿ ತಾನಾದೆ ಎಂದುಕೊಳ್ಳದೆ ಕರ್ತವ್ಯ ಎಂದೆ ಎಲ್ಲ ಕೆಲಸವನ್ನು ಮಾಡುತ್ತಿರುತ್ತಾನೆ. ಕೆಲಸ ಎನ್ನುವದು ಆ ವ್ಯಕ್ತಿಗೆ ತ್ರಾಸು, ಸುಸ್ತು ಎನ್ನಿಸುವುದೇ ಇಲ್ಲ. ಆಲಸ್ಯ ಅನ್ನುವ ಪದವೂ ಗೊತ್ತಿಲ್ಲ ಎನ್ನುವಂತೆ ನಡೆಯುತ್ತಿರುತ್ತಾನೆ. ಇಂಥವರು ಬಲು ಅಪರೂಪ.
ಹುಟ್ಟಿನಿಂದ ಮದುವೆ ಆಗುವವರೆಗೆ ನನ್ನದೊಂದು ರೀತಿ ಅಲೆಮಾರಿ ಜೀವನ. ಹುಟ್ಟಿದ ಮನೆಯಿಂದ ಶಾಲೆ ಕಲಿಯಲು ಸಾಕಷ್ಟು ದೂರ ನಡೆದು ಹೋಗಬೇಕಿತ್ತು. ಹಾಗಾಗಿ ಬೇರೆ ಊರಲ್ಲಿ, ಬೇರೆಯವರ ಮನೆಯಲ್ಲಿ ಉಳಿದು ಶಾಲೆ ಕಾಲೇಜುಗಳು ಮುಗಿದಿದ್ದವು. ಕೆಲವು ದಿನಗಳ ಹಿಂದೆ ನಾನು ಶಾಲೆಗಾಗಿ ಉಳಿದಿದ್ದ ಒಂದು ಊರಿಗೆ ಹೋಗುವ ಸಂದರ್ಭ ಬಂದಿತು. ನನ್ನ ಸಹಪಾಠಿ ಒಬ್ಬ ಎದುರಾದ. ಅವನನ್ನು ನೋಡಿ ನನಗೆ ಆಶ್ಚರ್ಯವೇ ಕಾದಿತ್ತು. ನಾವು ಶಾಲೆಗೆ ಹೋಗುವಾಗ ಆತ ಕಡುಬಡವ. ಯಾರದ್ದೋ ಮನೆಯ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಕೊಳ್ಳುತ್ತಿದ್ದ ತಾಯಿ ಮಗ. ಶಾಲೆಗೆ ಬರುವುದೇ ಅಮವಾಸ್ಯೆಗೊಮ್ಮೆ, ಹುಣ್ಣಿಮೆಗೊಮ್ಮೆ. ಅಂಕಗಳಂತು ಹೆಚ್ಚಗಿ ಎರಡು ದೋಸೆಯೇ ಬೀಳುತಿತ್ತು. ಕಲಿಕೆಯಲ್ಲಿ ಹಿಂದಿದ್ದವನು ಇಂದು ಕತ್ತಲ್ಲಿ ಬಂಗಾರದ ಚೈನು. ದುಬಾರಿ ವಾಚು, ಹದಿನೈದು ಲಕ್ಷದ ಕಾರಲ್ಲಿ ನನ್ನೆದುರು ಬಂದು ನಿಂತಾಗ ಖುಷಿಯು ಆಯ್ತು, ಆಶ್ಚರ್ಯವೂ ಆಯ್ತು. ಹತ್ತನೇ ತರಗತಿ ಫೇಲಾದ ಮೇಲೆ ಮುಂದೆ ಓದಲಿಲ್ಲ. ಏನಾದರೂ ಸ್ವಂತವಾಗಿ ದುಡಿಮೆ ಮಾಡಬೇಕು. ಕೂಲಿಗೆ ಹೋಗಬಾರದು ಅಂತ ತಳ್ಳುವ ಗಾಡಿಯಲ್ಲಿ ಬಟ್ಟೆಗಳನ್ನು ಇಟ್ಟುಕೊಂಡು ಸಂತೆಗಳಲ್ಲಿ ಮಾರುತ್ತಿದ್ದ. ಸಂತೆ ಇಲ್ಲದ ದಿನದಲ್ಲಿ ಮನೆಮನೆಗೆ ಹೋಗಿ ಬಟ್ಟೆ ಮಾರುತ್ತಿದ್ದ. ಹೆಚ್ಚಿನದಾಗಿ ಮಧ್ಯಮವರ್ಗದವರ ಕೈಗೆ ಎಟಕುವ ಬಟ್ಟೆಗಳನ್ನೆ ಮಾರುತ್ತಿದ್ದ. ಹೆಣ್ಣುಮಕ್ಕಳ ಬಟ್ಟೆಯಾದ ಸೀರೆ, ಲಂಗ, ನೈಟಿಗಳೆ ಹೆಚ್ಚಿರುತ್ತಿದ್ದವು. ಒಂದು ದಿನವೂ ಆತ ತಳ್ಳುಗಾಡಿಯನ್ನು ಬಿಡಲಿಲ್ಲ. ಹಾಗಿರುವಾಗ ಅವನು ಬಟ್ಟೆಯನ್ನು ಜನರಿಗೆ ಮಾರುವ ರೀತಿ, ಜನರಲ್ಲಿ ಬಟ್ಟೆಯ ಬಗ್ಗೆ ಹುಟ್ಟಿಸುವ ಭರವಸೆಯ ಮಾತುಗಳನ್ನು ಒಬ್ಬ ದೊಡ್ಡ ಬಟ್ಟೆ ಅಂಗಡಿಯ ಮಾಲಿಕ ನೋಡಿದ. ಆತ ತನ್ನ ಅಂಗಡಿಗೆ ಅವನನ್ನು ಕರೆದುಕೊಂಡು ಹೋದ. ಅಲ್ಲಿಗೆ ಹೋದಮೇಲೆ ಹಗಲು ರಾತ್ರಿ ಎನ್ನದೇ ಅಂಗಡಿಯಲ್ಲಿ ದುಡಿದ. ಬಂದ ಸಂಬಳದಲ್ಲಿ ಹಣ ಉಳಿಸಿದ್ದಲ್ಲದೇ ಬಟ್ಟೆ ಅಂಗಡಿಯ ಎಲ್ಲ ರಿತಿಯ ವ್ಯವಹಾರವನ್ನು ಕಲಿತ. ನಂತರದಲ್ಲಿ ತನ್ನದೇ ಸ್ವಂತ ಅಂಗಡಿ ತೆರೆದು ಗ್ರಾಹಕರಿಗೆ ರುಚಿಸುವಂಥಹ ಬಟ್ಟೆಗಳನ್ನೇ ಅಂಗಡಿಯಲ್ಲಿಟ್ಟು ಮಾರತೊಡಗಿದ. ಲಾಭ ಬರತೊಡಗಿತು. ಈಗ ಅವನು ಮೂರು ಬಟ್ಟೆ ಅಂಗಡಿಯ ಮಾಲಿಕನಾಗಿದ್ದ. ಅಲ್ಲದೇ ‘ಹುಬ್ಬಳ್ಳಿಯಲ್ಲಿ ಕೆಲವೇ ತಿಂಗಳ ಹಿಂದೆ ಮತ್ತೊಂದು ಹೊಸ ಬಟ್ಟೆ ಅಂಗಡಿ ತೆರೆದಿದ್ದೇನೆ. ನಾನು ಬಟ್ಟೆ ಮಾರಾಟ ಆರಂಭಿಸಿದ ದಿನದಿಂದ ಒಂದು ದಿನವೂ ಕೆಲಸ ಬಿಟ್ಟಿಲ್ಲ. ಹಾಗೆ ನನ್ನ ಸ್ವಂತ ಅಂಗಡಿಯ ಬಾಗಿಲನ್ನು ಕೂಡ ರಜೆ ಎಂದು ಮುಚ್ಚಿಲ್ಲ. ಈಗಲೂ ಅದೇ ಕೆಲಸದ ನಿಮಿತ್ತ ಹೊರಟಿದ್ದೆ. ನಿನ್ನನ್ನು ಕಂಡು ಕಾರು ನಿಲ್ಲಿಸಿ ಇಲ್ಲಿಗೆ ಬಂದೆ ಎಂದವನ ಮುಖದಲ್ಲಿ ತನ್ನ ಸ್ನೇಹಿತೆಯ ಬಳಿ ತನ್ನ ಶ್ರಮ ಹೇಳಿಕೊಂಡಿದ್ದರ ಖುಷಿ, ಸಂತೃಪ್ತಿ, ಕಣ್ಣಿನ ಹೊಳಪಲ್ಲಿ ಎದ್ದು ಕಾಣಿಸಿತ್ತು.
ಹೊಸವರ್ಷ ಆರಂಭವಾಗಿದೆ. ಹೊಸವರ್ಷ ಆರಂಭವಾದಾಗಿನಿಂದ ಏನನ್ನೋ ನಾನು ಮಾಡುತ್ತೇನೆ ಎಂದು ಯೋಜನೆ ಹಾಕಿ ಕೈ ಕಟ್ಟಿ ಕೂತರೆ 2023 ಹೋಗಿ 2024 ಕೂಡ ಬರುತ್ತದೆ. ಹೊಸದಾದ ಯೋಜನೆಯ ಬಗ್ಗೆ ಯೋಚಿಸುವುದಕ್ಕಿಂತ ಹಳೆಯ ಯೋಜನೆಯನ್ನು ಕಾರ್ಯಗತ ಮಾಡುವುದರತ್ತ ಮಗ್ನರಾದರೆ ನಮಗೆ ಲಾಭ ಇದೆ. ಹೊಸ ವರ್ಷ ಎನ್ನುವುದು ಒಂದು ದಿನದ ಉತ್ಸವವಲ್ಲ. ಮತ್ತೊಂದು ಹೊಸ ವರ್ಷದ ಆಗಮನದಲ್ಲಿ ಹಳೆಯ ವರ್ಷದ ಕೆಲಸಗಳೆಲ್ಲ ಮುಗಿಸಿರುವುದು ಉತ್ಸವ. ಮತ್ತೊಂದು ವರ್ಷಕ್ಕೆ ಕಾಲಿಟ್ಟಿದ್ದೇವೆ. ನಾಳೆ ಏನೋ ಮಾಡುತ್ತೇವೆ ಎಂದಲ್ಲ. ನಿನ್ನೆಯ ಜವಬ್ದಾರಿ ಕೆಲಸಗಳು ಮುಗಿದಿದೆಯೇ ಎಂದು ಪುಟ ತಿರುಗಿಸಿ ನೋಡಿದರೆ ಹೊಸತನ ಅಲ್ಲಿಯೇ ಹುಟ್ಟಿಕೊಳ್ಳುತ್ತದೆ.
- * * * -