ನವದೆಹಲಿ, ಏಪ್ರಿಲ್ 6, ಮಹಾವೀರ ಜಯಂತಿ ಆಚರಣೆಯೊಂದಿಗೆ ಸೋಮವಾರದಿಂದ ಆರಂಭವಾಗುವ ಎರಡನೇ ಹಂತದ ಹಬ್ಬ-ಆಚರಣೆಗಳ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ನಿಗಾ ವಹಿಸಿದೆ ಎಂದು ಮೂಲಗಳು ತಿಳಿಸಿವೆ.ಮಹಾವೀರ ಜಯಂತಿಯಲ್ಲದೆ, ಏಪ್ರಿಲ್ 14 ರವರೆಗೆ ಹಲವು ಆಚರಣೆಗಳಿದ್ದು, ಈ ದಿನಗಳಲ್ಲಿ ಜನರು ಗುಂಪುಗೂಡುವುದಕ್ಕೆ ಅವಕಾಶ ನೀಡದಿರಲು ಸರ್ಕಾರ ಕ್ರಮ ತೆಗೆದುಕೊಂಡಿದೆ.
ಸಬೆಬರತ್ ಮತ್ತು ಗುಡ್‍ಫ್ರೈಡೆ ಏಪ್ರಿಲ್ 9 ಮತ್ತು 10 ರಂದು ಆಚರಿಸಲಾಗುವುದು. ಹಾಗೆಯೇ ನೀಲ್ ಪೂಜಾ ಮತ್ತು ಚರಕ್ ಪೂಜೆ ಆಚರಣೆಗಳು ಏಪ್ರಿಲ್ 12 ಮತ್ತು 13 ರಂದು ಆಚರಿಸುವುದರಿಂದ ಮತ್ತು ಏಪ್ರಿಲ್ 14 ರಂದು ಕೆಲ ಸಮುದಾಯಗಳ 'ಹೊಸ ವರ್ಷ' ಆಚರಣೆಯಿರುವುದರಿಂದ ಜನಸಂದಣಿಯಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಕಣ್ಗಾವಲು ವಹಿಸಿದೆ.
ಕೊರೊನ ವಿರುದ್ದ ಹೋರಾಟದಲ್ಲಿ ಒಗ್ಗಟ್ಟು ತೋರಿಸಲು ಪ್ರಧಾನಿ ನರೇಂದ್ರಮೋದಿ ಕರೆ ನೀಡಿದ್ದ ದೀಪ ಬೆಳಗುವ ಕಾರ್ಯಕ್ರಮ ನಡೆದ ಮರುದಿನ ಹಬ್ಬಗಳ ಎರಡನೇ ಹಂತ ಆರಂಭವಾಗುತ್ತಿದ್ದಂತೆ ಸರ್ಕಾರ ತೀವ್ರ ನಿಗಾ ವಹಿಸಿದೆ.
ದೀಪ ಬೆಳಗುವ ವೇಳೆ ರಾತ್ರಿ 9 ಗಂಟೆಯಿಂದ ಒಂಬತ್ತು ನಿಮಿಷಗಳ ಕಾಲ ಐಕ್ಯತೆ ತೋರಿದ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸಿರುವ ಬಗ್ಗೆ ವರದಿಯಾಗಿದೆ. ಇಂತಹ ಕೆಲ ಘಟನೆಗಳನ್ನು ಹೊರತು ಪಡಿಸಿ ಮಾರ್ಚ್ 25 ರಿಂದ ಏಪ್ರಿಲ್ 2ರ ವರೆಗಿನ ನವರಾತ್ರದ ಮೊದಲ ಹಂತದ ಹಬ್ಬದ ಸಂದರ್ಭದಲ್ಲಿ ದೇಶದ ಯಾವುದೇ ಭಾಗದಿಂದ ಸಾಮಾಜಿಕ ಅಂತರ ಉಲ್ಲಂಘನೆಯ ಬಗ್ಗೆ ವರದಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸೋಂಕಿನಿಂದ ಸಾವಿನ ಸಂಖ್ಯೆ 109 ಕ್ಕೆ ಏರಿದೆ. ಒಟ್ಟಾರೆ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಪ್ರಧಾನಿ ಸೋಮವಾರ ಕೇಂದ್ರ ಸಚಿವ ಸಂಪುಟದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.