ಕೀಕಿ ಚಾಲೆಂಜ್ ಸ್ವೀಕರಿಸಿದ ಮೂವರಿಗೆ ರೈಲು ನಿಲ್ದಾಣ ಸ್ವಚ್ಛಗೊಳಿಸುವ ಶಿಕ್ಷೆ



ಮುಂಬೈ 09: ಇತ್ತೀಚಿಗೆ ಯುವಜನಾಂಗದಲ್ಲಿ ಕ್ರೇಜ್ ಗೆ ಕಾರಣವಾಗುತ್ತಿರುವ ಅಪಾಯಕಾರಿ  ಕೀಕೀ ಚಾಲೆಂಜ್ ಸಾಕಷ್ಟು ಅನಾಹುತಕ್ಕೂ ಕಾರಣವಾಗುತ್ತಿದೆ. ಹೀಗೆ ಮಹಾರಾಷ್ಟ್ರದಲ್ಲಿ  ಚಲಿಸುತ್ತಿರುವ ರೈಲಿನಿಂದ  ಕೀಕೀ ಚಾಲೆಂಜ್  ಸ್ವೀಕರಿಸಿದ ಮೂವರಿಗೆ  ವಾಸೈ ರೈಲ್ವೆ ನಿಲ್ದಾಣವನ್ನು ಸತತವಾಗಿ ಮೂರು ದಿನಗಳ ಕಾಲ ಸ್ವಚ್ಛಗೊಳಿಸುವಂತೆ  ಪಾಲ್ಗರ್  ನ್ಯಾಯಾಲಯ ಆದೇಶಿಸಿದೆ. 

ಕೆನಡಿಯನ್  ರಾಪರ್ ಡ್ರೇಕ್  ಚಲಿಸುತ್ತಿರುವ ಕಾರಿನಿಂದ ಜಿಗಿದು ತನ್ನಷ್ಟಕ್ಕೆ ತಾನೇ ನೃತ್ಯ ಮಾಡುವ ಮೂಲಕ ಕೀಕೀ ಚಾಲೆಂಜ್ ಆರಂಭಗೊಂಡಿತ್ತು. 

ವಾಸೈ ರೈಲು ನಿಲ್ದಾಣದಲ್ಲಿ ಈ ವಿಡಿಯೋವನ್ನು  ಶ್ಯಾಮ್ ಶಮರ್ಾ (24)  ಧ್ರುವ್ (23) ಮತ್ತು ನಿಶಾಂತ್ (20) ಎಂಬುವರು ಚಿತ್ರೀಕರಿಸಿದ್ದರು. ನಂತರ ಅದನ್ನು ವಾರದ ಹಿಂದಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಇದನ್ನು ಸುಮಾರು 1.5 ಲಕ್ಷ ಜನರು ವೀಕ್ಷಿಸಿದ್ದರು. 

ಮೂವರನ್ನು ನಿನ್ನೆದಿನ ಬಂಧಿಸಿ  ವಾಸೈ ರೈಲ್ವೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಸತತ ಮೂರು ದಿನಗಳ ಕಾಲ ರೈಲು ನಿಲ್ದಾಣ ಸ್ವಚ್ಚಗೊಳಿಸುವಂತೆ  ಆದೇಶಿಸಲಾಗಿದೆ. ಅಲ್ಲದೇ,  ಕಿಕಿ ಚಾಲೆಂಜ್  ಸಾಹಸವನ್ನು ಬಿಟ್ಟುಬಿಡುವಂತೆ ಪ್ರಯಾಣಿಕರಿಗೆ  ಮಾಹಿತಿ ನೀಡಿದೆ ಎಂದು  ಹಿರಿಯ ರೈಲ್ವೆ ರಕ್ಷಣಾ  ಪಡೆಯ  ಅಧಿಕಾರಿಗಳು ತಿಳಿಸಿದ್ದಾರೆ. 

ಕೀಕೀಯಂತಹ ಅಪಾಯಕಾರಿ  ಚಾಲೆಂಜ್   ಬಗ್ಗೆ  ಜನರಲ್ಲಿ ಅರಿವು ಮೂಡಿಸುವ  ದೃಷ್ಟಿಯಿಂದ ವಾಸೈ ರೈಲು ನಿಲ್ದಾಣದ ಎಲ್ಲಾ ಫ್ಲಾಟ್ ಫಾರಂಗಳನ್ನು  ಬೆಳಗ್ಗೆ 11 ರಿಂದ   ಮಧ್ಯಾಹ್ನ  2 ಗಂಟೆಯವರೆಗೂ ಮತ್ತೆ ನಂತರ  ಮಧ್ಯಾಹ್ನ  3 ಗಂಟೆಯಿಂದ  5 ಗಂಟೆಯವರೆಗೂ ಸ್ವಚ್ಛಗೊಳಿಸುವಂತೆ  ರೈಲ್ವೆ ನ್ಯಾಯಾಲಯ ಆದೇಶಿಸಿರುವುದಾಗಿ  ಅಧಿಕಾರಿಗಳು ಹೇಳಿದ್ದಾರೆ.