ಬಿಹಾರದಲ್ಲಿ ಮೂರು ಪ್ರತ್ಯೇಕ ರಸ್ತೆ ಅಪಘಾತ ೮ ಮಂದಿ ಸಾವು, ಆರು ಮಂದಿಗೆ ಗಾಯ

ಪಾಟ್ನಾ, ಜೂನ್ ೩೦; ಬಿಹಾರದಲ್ಲಿ   ಸೋಮವಾರ  ಸಂಭವಿಸಿದ ಮೂರು  ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಒಟ್ಟು ೮ ಮಂದಿ ಸಾವನ್ನಪ್ಪಿ ಆರು ಮಂದಿ   ಗಾಯಗೊಂಡಿದ್ದಾರೆ. ರೊಹತಾಸ್  ಜಿಲ್ಲೆಯ ಮಂಜಿಹಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ನಡೆದ  ರಸ್ತೆ ಅಪಘಾತದಲ್ಲಿ ಓರ್ವ ಬಾಲಕಿ ಸೇರಿ ಇಬ್ಬರು ಮೃತಪಟ್ಟು, ಇತರ ನಾಲ್ವರು  ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು  ತೆರಳುತ್ತಿದ್ದ   ಕಾರು   ಮಶಿಹಾಬಾದ್ ಗ್ರಾಮದ ಬಳಿ ರಸ್ತೆ ವಿಭಜಕಕ್ಕೆ  ಡಿಕ್ಕಿ  ಹೊಡೆದು  ಪಕ್ಕಕ್ಕೆ  ಉರುಳಿ ಬಿದ್ದು  ಬಾಲಕಿ ಸೇರಿದಂತೆ  ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ.

ಪಶ್ಚಿಮ ಚಂಪರಾಣ್ ಜಿಲ್ಲೆಯ  ಚಾತ್ರಾವಾ ಪೊಲೀಸ್ ಠಾಣೆ  ವ್ಯಾಪ್ತಿಯಲ್ಲಿ  ಕಾರೊಂದು  ಎದುರಿಗೆ ಬರುತ್ತಿದ್ದ ವಾಹನದ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಮಕ್ಕಳು ಮೃತಪಟ್ಟು,   ಇತರ ಇಬ್ಬರು ಗಾಯಗೊಂಡಿದ್ದಾರೆ.ರೊಹತಾಸ್ ಜಿಲ್ಲೆಯ ಸಾಸರಾಂನಲ್ಲಿ ನಡೆದ ಮತ್ತೊಂದು ರಸ್ತೆ ಅಪಘಾತದಲ್ಲಿ  ಇಬ್ಬರು ಮೃತಪಟ್ಟಿದ್ದಾರೆ ಚಂಪಾನ್ ಪುರ ಗ್ರಾಮದ ಅಜಿತ್ ಹಾಗೂ ಅಮಾನ್  ಮೃತಪಟ್ಟ ದುರ್ದೈವಿಗಳಾಗಿದ್ದು, ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಬೈಕ್ ನಲ್ಲಿ  ಮನೆಗೆ ವಾಪಸ್ಸು ಬರುತ್ತಿದ್ದಾಗ,  ವೇಗವಾಗಿ ಬರುತ್ತಿದ್ದ  ಟ್ರಕ್  ಹರಿದು  ಇಬ್ಬರೂ  ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ  ರವಾನಿಸಲಾಗಿದೆ.   ಆದರೆ,  ಟ್ರಕ್  ಚಾಲಕ   ವಾಹನದೊಂದಿಗೆ  ಸ್ಥಳದಿಂದ ಪರಾರಿಯಾಗಿದ್ದು, ಚಾಲಕನ ಬಂಧನಕ್ಕೆ  ಪ್ರಯತ್ನ ಮುಂದುವರಿದಿದೆ ಎಂದು  ಪೊಲೀಸರು ತಿಳಿಸಿದ್ದಾರೆ.