ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಮೂವರ ಬಂಧನ

ಲೋಕದರ್ಶನ ವರದಿ 

ಹಳಿಯಾಳ,29: ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಮೂವರು ಆರೋಪಿತರನ್ನು ಸೆರೆಹಿಡಿದರುವ ಇಲ್ಲಿನ ಪೊಲೀಸರು ಆಪಾದಿತರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಹಳಿಯಾಳ ಪಟ್ಟಣದಲ್ಲಿ ನಡೆದಿದ್ದ ಎರಡು ಪ್ರಕರಣಗಳು ಹಾಗೂ ದಾಂಡೇಲಿ ನಗರದಲ್ಲಿನ ಒಂದು ಪ್ರಕರಣವನ್ನು ಬೇಧಿಸಲಾಗಿದ್ದು ಈ ಕುಕೃತ್ಯದಲ್ಲಿ ಪಾಲ್ಗೊಂಡಿದ್ದ ಧಾರವಾಡದ ತಾಯಿ ಹಾಗೂ ಮಗನ ಸಮೇತ ಇನ್ನೋರ್ವನನ್ನು ಮಂಗಳವಾರ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಧಾರವಾಡ ಮಾಳಾಪುರದ ಜುಮ್ಮಾಮಸೀದಿ ಹತ್ತಿರ ಮನೆ ಇರುವ ಚಾಲಕ ವೃತ್ತಿಯ ಸಲೀಂ ಮಹ್ಮದಸಾಬ ಹಳ್ಳಿಕೇರಿ (38) ಹಾಗೂ ಆತನ ತಾಯಿ ಫಾತಿಮಾ ಮಹ್ಮದಸಾಬ ಹಳ್ಳಿಕೇರಿ (62) ಹಾಗೂ ವೃತ್ತಿಯಲ್ಲಿ ಅಟೋ ಚಾಲಕನಾಗಿರುವ ಧಾರವಾಡ ವಿದ್ಯಾಗಿರಿಯ ನಿವಾಸಿ ಅಮೀರ ಗುಲಾಂಮೊಹಿದ್ದೀನ್ (62) ಇವರು ಹಳಿಯಾಳ ಪೊಲೀಸರಿಂದ ಬಂಧಿತರಾದವರು. ಇವರುಗಳೇ ಹಾಸನ ಜಿಲ್ಲೆಯ ಅರಸಿಕೇರೆ ಶಹರ ಠಾಣಾ ವ್ಯಾಪ್ತಿಯಲ್ಲಿ ಘಟಿಸಿದ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

12-10-2018 ರಲ್ಲಿ ದಾಂಡೇಲಿಯ ಅಂಗಡಿಯೊಂದರಲ್ಲಿ ಕಳ್ಳತನವಾಗಿದ್ದ 30 ಸಿಗರೇಟ್ ಪ್ಯಾಕೆಟ್ಗಳನ್ನು, 19-10-2018 ರಂದು ಹಳಿಯಾಳ ಪಟ್ಟಣದ ಗಣಪತಿಗಲ್ಲಿ ನಿವಾಸಿ ಮಂಜುನಾಥ ನಾರಾಯಣ ಶೆಟ್ಟಿ ಇವರ ಮನೆಯಿಂದ ಕಳ್ಳತನವಾಗಿದ್ದ ಸೋನಿ ಎಲ್ಇಡಿ ಟಿವಿ, 20 ಗ್ರಾಂ ಬಂಗಾರದ ಕರಿಮಣಿ ಸರ, 2 ರೇಷ್ಮೆ ಸೀರೆ, 19-11-2018 ರಂದು ಚಲವಾದಿಗಲ್ಲಿಯ ಮನೆಯೊಂದರಲ್ಲಿ ಕಳ್ಳತನವಾಗಿದ್ದ ಫಿಲಿಪ್ಸ್ ಟಿವಿ ಹೀಗೆ ಆಪಾದಿತರಿಂದ ಒಟ್ಟು 1 ಲಕ್ಷ 4 ಸಾವಿರ ಮೌಲ್ಯಗಳ ವಸ್ತುಗಳನ್ನು ಹಾಗೂ ಕಳ್ಳತನಕ್ಕಾಗಿ ಉಪಯೋಗಿಸಿದ ಮೋಟರ್ಸೈಕಲ್ ಜಪ್ತಪಡಿಸಿಕೊಳ್ಳಲಾಗಿದೆ.

ಜಿಲ್ಲಾ ಹಾಗೂ ಉಪವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಳಿಯಾಳ ಸಿಪಿಐ ಬಿ.ಎಸ್. ಲೋಕಾಪುರ, ಪಿಎಸ್ಐ ಆನಂದಮೂತರ್ಿ ಸಿ. ಇವರ ನೇತೃತ್ವದಲ್ಲಿ ನಡೆದ ಕಾಯರ್ಾಚರಣೆಯಲ್ಲಿ ಎಎಸ್ಐ ಗಳಾದ ಆನಂದ ಪಾವಸ್ಕರ, ಬಾಲಚಂದ್ರ ವಿ. ಹೆಗಡೆ, ಸಿಬ್ಬಂದಿಗಳಾದ ಮಹ್ಮದ ಹನೀಫ ಮುಲ್ಲಾ, ಶಾಹನವಾಜ ತಡಕೋಡ, ಬಸವರಾಜ ಆರ್.ಎಸ್., ಗೋವಿಂದ ಉಪ್ಪಾರ, ಗುರುರಾಜ, ಅನ್ವರಖಾನ್, ಶ್ರೀಶೈಲ ಮಂಗಾನವರ, ರಾಚಪ್ಪಾ ಧನಗರ, ರಾಜು ನಾಯ್ಕ, ಅರವಿಂದ ಭಜಂತ್ರಿ, ವಿದ್ಯಾ ನಾಯ್ಕ, ಗೀತಾ ನಾಯಕ, ಸೌಮ್ಯ ಗೌಡ ಮೊದಲಾದವರು ಭಾಗವಹಿಸಿದ್ದರು.