ಬೆಂಗಳೂರು: ನೀವು ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದಾದಲ್ಲಿ ನಿಮಗೆ ನಿಮ್ಮ ಕೆಲಸಕ್ಕೆ ಸರಿಯಾಗಿ ವೇತನ ಪಡೆಯುವುದಕ್ಕೆ ಹಕ್ಕು ಇದೆ ಎಂದರ್ಥ, ಆದರೆ ಇದು ಬೆಂಗಳೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕರಿಗೆ ಅನ್ವಯವಾಗುವುದಿಲ್ಲ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಡಿಯಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕ ಮಹಿಳೆಯೊಬ್ಬರಿಗೆ ಮೂರು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ.
ದಾಸರಹಳ್ಳಿಯ ಚೊಕ್ಕಸಂದ್ರ ವಾರ್ಡ್ ನಲ್ಲಿ ಕೆಲಸ ನಿರ್ವಹಿಸುವ 42 ವರ್ಷದ ಆಂಜನಮ್ಮ ಅವರ ನೋವನ್ನು ಕೇಳುವವರಿಲ್ಲವಾಗಿದೆ. ವೇತನ ಕೇಳ ಹೋದ ಈಕೆ ಹಾಗೂ ಇವರ ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆದಿದ್ದು ಈಕೆಗೆ ರಕ್ತಸ್ರಾವವಾಗುವತೆ ಏಟು ನೀಡಲಾಗಿದೆ. ಮೈ ಮೇಲಿನ ಗಾಯಗಳೊಂದಿಗೆ ವೈದ್ಯರ ಬಳಿ ಹೋದ ಅಂಜನಮ್ಮ ನಿಗೆ ವೈದ್ಯರು ಕನಿಷ್ಟ ಒಂದು ವಾರ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಆದರೆ ಆಕೆ ಮಾತ್ರ ದಿನದ ಖರ್ಚಿಗೆ ಹಣವಿಲ್ಲವಾಗುವುದೆಂದು ಮತ್ತೆ ಕೆಲಸಕ್ಕೆ ತೆರಳಿದ್ದಾರೆ.
"ನಾನು ನನ್ನ ತಾಯಿ, ಪತಿ, ಮೂವರು ಮಕ್ಕಳು ಹಾಗೂಸೋದರ ಸೊಸೆಯೊಂದಿಗೆ ವಾಸಿಸುತ್ತಿದ್ದು ನನ್ನದು ದೊಡ್ಡ ಪರಿವಾರ, ಮಕ್ಕಳಿನ್ನೂ ಚಿಕ್ಕವರು. ಬಿಬಿಎಂಪಿ ವೇತನ ಪಾವತಿಸದೆ ಹೋದಲ್ಲಿ ನಾವು ಸಾಲಗಾರರಾಗಬೇಕಾಗುವುದು."ನಾನು ನನಗೆ ಸಿಕ್ಕಬೇಕಾದ ವೇತನ ಕೇಳಲು ಮುಂದಾಗಿದ್ದೆ. ನಾನು ನನ್ನಂತೆಯೇ ಮೂರು ನಾಲ್ಕು ತಿಂಗಳಿನಿಂದ ವೇತನ ಪಡೆಯದ ನನ್ನ ಕೆಲ ಸಹೋದ್ಯೋಗಿಗಳ ಜತೆಯಲ್ಲಿ ಮೇಲಾಧಿಕಾರಿಗಳತ್ತ ತೆರಳಿ ಗಟ್ಟಿಯಾಗಿ ಪ್ರಶ್ನಿಸಿದ್ದೆ. ಆಗ ಅವರುಗಳು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ" ಅಂಜನಮ್ಮ ಹೇಳಿದ್ದಾರೆ.
ಕಳೆದ ವರ್ಷ ಅಂಜನಮ್ಮ ವೇತನಕ್ಕಾಗಿ ತನ್ನ ಮೇಲ್ವಿಚಾರಕರನ್ನು ಸಂಪರ್ಕಿಸಿದಾಗ ಅವರು "ನಾನು ಎಂದು ಹಣ ನೀಡುವೆನೋ ಆ ದಿನ ತೆಗೆದುಕೊಳ್ಳಬೇಕು" ಎಂದು ಧಮಕಿ ಹಾಕಿದ್ದಾರೆ. ನಾನು ಮರುದಿನ ನಮ್ಮ ಗುತ್ತಿಗೆದಾರರನ್ನು ಭೇಟಿಯಾಗುವಂತೆ ಹೇಳಲಾಗಿತ್ತು, ಅದರಂತೆ ನಾನು ಮತ್ತು ನನ್ನ ಸಹೋದ್ಯೋಗಿಗಳು ಅವರನ್ನು ಭೇಟಿಯಾದಾಗ ಅವರು ಕೋಪದಿಂದ ನನ್ನ ಹಾಗೂ ಇತರರ ಮೇಲೆ ಹರಿಹಾಯ್ದಿದ್ದಾರೆ."
ನಾನು ನನ್ನ ವೇತನಕ್ಕಾಗಿ ಪಟ್ಟು ಹಿಡಿದ ಒಂದು ಹಂತದಲ್ಲಿ ಅವರು (ಪುರುಷ ಗುತ್ತಿಗೆದಾರ) ಹಾಗೂ ಮೇಲ್ವಿಚಾರಕರಿಬ್ಬರೂ ನನ್ನ ಮೇಲೆ ಆಕ್ರಮಣ ಮಾಡಿದ್ದಾರೆ. ಗುತ್ತಿಗೆದಾರ ನನ್ನ ಕೈಗಳನ್ನು ಬಿಗಿಯಾಗಿ ಹಿಡಿದಾಗ ಮೇಲ್ವಿಚಾರಕ ನನಗೆ ಬಲವಾಗಿ ಗುದ್ದಿದ್ದಾರೆ. ಆಗ ಕೆಳಗೆ ಬಿದ್ದ ನನ್ನನ್ನ್ನು ರಕ್ಷಿಸಲು ಆಗಮಿಸಿದ ನನ್ನ ಸಹೋದ್ಯೋಗಿ ಸಹ ಗಾಯಗೊಂಡಿದ್ದಳು, ನನ್ನ ಕೈನಲ್ಲಿ ರಕ್ತ ಬರುತ್ತಿತ್ತು. ಅವರು ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು.ಹಲ್ಲೆ ನಡೆದ ಬಳಿಕ ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ವೈದ್ಯರು ವಾರದ ಮಟ್ಟಿಗೆ ವಿಶ್ರಾಂತಿಗೆ ಸೂಚಿಸಿದ್ದರು. ಆದರೆ ಕುಟುಂಬ ನಿರ್ವಹಣೆ ಕಷ್ಟವಾಗುವುದರಿಂದ ನಾನು ವಿಶ್ರಾಂತಿ ಪಡೆಯುವುದು ಸಾಧ್ಯವಾಗಿಲ್ಲ. ಎಂದು ಅವರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಪೌರಕಾರ್ಮಿಕರ ಒಕ್ಕೂಟದ ಸಹಕಾರದಿಂದ ಹಲ್ಲೆ ನಡೆಸಿದ್ದವರ ಮೇಲೆ ಪೀಣ್ಯ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ, ಮೇಲ್ವಿಚಾರಕನ ಬಂಧನವಾಗಿತ್ತು, ಆದರೆ ಅವರು ಕೆಲವೇ ದಿನಗಳಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.ಈಗ ಅವರು ತನ್ನ ವಿರುದ್ದದ ಪ್ರಕರಣವನ್ನು ಹಿಂಪಡೆಯಬೇಕೆಂದು ಒತ್ತಡ ಹೇರುತ್ತಿದ್ದಾರೆ. ಎಂದು ಅಂಜನಮ್ಮ ಹೇಳಿದ್ದಾರೆ. ಅವರು ಪ್ರಸ್ತುತ ಬೇರೆ ಗುತ್ತಿಗೆದಾರರಡಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಂದು ಸಹ ಅವರಿಗೆ ಸರಿಯಾದ ವೇಳೆ ವೇತನ ಪಾವತಿಯಾಗುತ್ತಿಲ್ಲ, ವೇತನ ಕೇಳ ಹೋದರೆ ಹಲ್ಲೆಗಳು ನಡೆಯುತ್ತಿದೆ.
"ಹಲವು ಬಾರಿ ನಾನು ಕೆಲಸ ತೊರೆಯಬೇಕೆಂದು ಅಂದುಕೊಳ್ಳುತ್ತೇನೆ, ಆದರೆ ಕಳೆದ 22 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು ಇಂದಲ್ಲ ನಾಳೆ ಖಾಯಂ ಆಗಬಹುದೆಂದು ನಿರೀಕ್ಷಿಸುವಂತಾಗಿದೆ."
ಅಂಜನಮ್ಮ ಅವರ ತಾಯಿ ಸಹ ಪೌರಕಾರ್ಮಿಕರಾಗಿದ್ದು ಆಕೆಯ ಬಳಿಕ ಇದೀಗ ಅಂಜನಮ್ಮ ಈ ವೃತ್ತಿ ಮುಂದುವರಿಸಿದ್ದಾರೆ."1996 ರಲ್ಲಿ, ನನಗೆ ತಿಂಗಳಿಗೆ 300 ರೂ ವೇತನ ಒಪ್ಪಂದದೊಡನೆ ನಾನು ಬಿಬಿಎಂಪಿ ಸೇರಿದೆ.ಇದು ನನ್ನ ತಾಯಿಯ ಸಂಬಳಕ್ಕಿಂತ 50ರು. ಹೆಚ್ಚಾಗಿತ್ತು.ಅಂದು ದಾಸರಹಳ್ಳಿ ಪಂಚಾಯತಿ ಪ್ರದೇಶವಾಗಿತ್ತು. ಅಲ್ಲಿ ನಮಗೆ ನಿಗದಿತ ವೇಳೆಗೆ ವೇತನ ಪಾವತಿಯಾಗುತ್ತಿತ್ತು. ಉತ್ತಮ ಗುಣಮಟ್ಟದ ಜೀವನವನ್ನು ನಡೆಸುತ್ತಿದ್ದೆವು. "ಈಗ ನನಗೆ ತಿಂಗಳಿಗೆ 12,000 ಗಿಂತ ಹೆಚ್ಚು ವೇತನವಿದೆ" ಅಂಜನಮ್ಮ ವಿವರಿಸಿದ್ದಾರೆ.