ಕೊರೋನಾ ಭೀತಿ ಹಿನ್ನೆಲೆ: ಭೀಕರ ರಸ್ತೆ ಅಪಘಾತ: ಮೂವರು ಸಾವು

ಬಾಗಲಕೋಟೆ, ಮಾ 24, ಮಹಾಮಾರಿ ಕೋವಿಡ್-19 ಸೋಂಕಿನ ನಿರ್ಬಂಧದ ನಡುವೆಯೂ ತಮ್ಮ ಊರಿಗೆ ಹೊರಟಿದ್ದ ಮೂವರು ಕಾರು ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಇಳಕಲ್ ತಾಲೂಕಿನ ಹಿರೇಕೊಡಗಲಿ ಬಳಿ ಮಂಗಳವಾರ ಸಂಭವಿಸಿದೆ‌.ಬೀದರ ಜಿಲ್ಲೆ ಬಾಲ್ಕಿ ತಾಲೂಕಿನ ಕಟಕಚಿಂಚೂಳಿ ಗ್ರಾಮದ ಸುವರ್ಣ (40), ಬಸವಣ್ಣೆಪ್ಪ (70) ಸವಿತಾ (20) ಮೃತ ದುರ್ದೈವಿಗಳು. ಕೊರೋನಾ ಭೀತಿ ಹಿನ್ನೆಲೆಯಲ್ಲಿ ನಗರ ಪ್ರದೇಶದಿಂದ ತಮ್ಮ ಊರಿಗೆ ತೆರಳುತ್ತಿದ್ದ ಇವರು ದಯನೀಯವಾಗಿ ಅಸುನೀಗಿದ್ದಾರೆ. ಮೃತರೆಲ್ಲರೂ ಬೆಂಗಳೂರನಿಂದ ಇಳಕಲ್ ಮಾರ್ಗವಾಗಿ ಬೀದರಗೆ ತೆರಳುತ್ತಿದ್ದಾಗ, ಹಿರೇಕೊಡಗಲಿ ಬಳಿ ರಸ್ತೆ ತಿರುವು ಗೊತ್ತಾಗದೆ ಕಲ್ಲು ಬಂಡೆಗೆ ಕಾರು ಡಿಕ್ಕಿ ಹೊಡಿದಿದೆ. ಪರಿಣಾಮ ಆರು ಜನರು ಗಂಭೀರ ಗಾಯಗೊಂಡಿದ್ದು, ಇಳಕಲ್ ಆಸ್ಪತ್ರೆಗೆ ಸಾಗಿಸುವ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ. ಇಳಕಲ್ ನಿಂದ ಬಾಗಲಕೋಟೆ ಆಸ್ಪತ್ರೆಗೆ ಹೋಗುವ ವೇಳೆ ಇನ್ನೊಬ್ಬರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಮೂರು ಜನ ಗಂಭೀರ ಗಾಯಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.