ಒಂದೇ ಕುಟುಂಬದ ಮೂವರು ಮಕ್ಕಳು ಕೆರೆಪಾಲು

ರಾಯಚೂರು, ಏ.9,  ನೀರು ತರಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಒಂದೇ ಕುಟುಂಬದ ಮೂವರು ಮಕ್ಕಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ನಡೆದಿದೆ. ನಾಗರಾಜ್ (10), ಕಾರ್ತಿಕ್ (8) ಹಾಗೂ ರವಿಕುಮಾರ್ (7) ಮೃತ ಬಾಲಕರು. ಮೃತ  ಬಾಲಕರು ಒಂದೇ ಕುಟುಂಬದವರಾಗಿದ್ದು, ಗುರುವಾರ ಬೆಳಗ್ಗೆ  7 ಗಂಟೆ‌ ಸುಮಾರಿಗೆ ನೀರು  ತರಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ  ವೇಳೆ ಒಬ್ಬ ಬಾಲಕ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ನೋಡಿದ ಮತ್ತೊಬ್ಬ ಬಾಲಕ  ಆತನನ್ನು ಕಾಪಾಡಲು ಹೋಗಿ ಆತನೂ ಕೆರೆಯಲ್ಲಿ ಮುಳುಗಿದ್ದು, ಇದೇ ರೀತಿ ಮೂವರು ಮಕ್ಕಳು  ಒಬ್ಬರನ್ನು ಕಾಪಾಡಲು ಒಬ್ಬರು ಹೋಗಿ ಮೂವರು ನೀರುಪಾಲಾಗಿದ್ದಾರೆ ಎನ್ನಲಾಗಿದೆ. ಸ್ಥಳೀಯರು ಕೆರೆಯ ಬಳಿ ಹೋಗಿ ನೋಡಿದಾಗ ಬಾಲಕರು ಮೃತಪಟ್ಟಿರುವುದು ಬೆಳಕಿಗೆ ಬಂದಿದ್ದು,  ತಕ್ಷಣ ಈ ಬಗ್ಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.