ಶ್ರೀನಗರದ ಲಾಲ್ ಚೌಕ್ ನಲ್ಲಿ ಗ್ರೆನೇಡ್ ದಾಳಿ ಪ್ರಕರಣ-ಮೂವರ ಬಂಧನ

ಶ್ರೀನಗರ, ಫೆ 8, ಶ್ರೀನಗರದ ಲಾಲ್ ಚೌಕ್ ಪ್ರದೇಶದಲ್ಲಿ ಕಳೆದ ಭಾನುವಾರ ನಡೆದ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.ಫೆ 2ರಂದು ನಡೆದ ಈ ದಾಳಿಯಲ್ಲಿ ಇಬ್ಬರು ಸಿಆರ್ ಪಿಎಫ್ ಸಿಬ್ಬಂದಿ ಹಾಗೂ ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ.

ಶ್ರೀನಗರದಲ್ಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹಸೀಬ್ ಮೊಘಲ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಜೈಷ್ ಎ ಮೊಹಮದ್ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿದ್ದಾರೆನ್ನಲಾದ ಮೂವರು ಯುವಕರನ್ನು ಬಂಧಿಸಲಾಗಿದೆ. ಬಂಧಿತರನ್ನು ಪುಲ್ವಾಮದ ಶಕೀಲ್ ಅಹ್ಮದ್ ಬಂದ್, ನವೀದ್-ಉಲ್-ಲತೀಫ್ ಪಡ್ರೂ ಹಾಗೂ ಶೋಪಿಯಾನ್ ಜಿಲ್ಲೆಯ ಶಂಶದ್ ಮನ್ಜೂರ್ ಎಂದು ಗುರುತಿಸಲಾಗಿದೆ ಎಂದು ಹೇಳಿಇದ್ದಾರೆ.

ಬಂಧಿತ ಶಕೀಲ್ ಅಹ್ಮದ್ ಬಂದ್, ಮೂರು ಬಾರಿ ಪುಲ್ವಾಮದಿಂದ ಪಿಡಿಪಿ ಶಾಸಕರಾಗಿ ಆಯ್ಕೆಯಾಗಿ ನಂತರ ನ್ಯಾಷನಲ್ ಕಾನ್ಫರೆನ್ಸ್ ಗೆ ಸೇರ್ಪಡೆಯಾಗಿರುವ ಮೊಹಮದ್ ಖಲೀಲ್ ಬಂದ್ ಅವರ ಅಣ್ಣನ ಮಗನಾಗಿದ್ದಾನೆ.ಗಡಿಯಂಚಿನ ಭಯೋತ್ಪಾದಕರೊಂದಿಗೆ ವಿದ್ಯಾರ್ಥಿಗಳಾಗಿರುವ ಬಂಧಿತ ಯುವಕರು ನಂಟು ಹೊಂದಿದ್ದರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.