ಪರಿಶಿಷ್ಟ ಪಂಗಡ ಮೀಸಲಾತಿ ಹೆಚ್ಚಳ ಕುರಿತು ಚಿಂತನೆ: ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆ

ಬೆಂಗಳೂರು, ಜ. 9, ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದ ಅಭಿವೃದ್ಧಿ ಸಂಬಂಧ ರಾಷ್ಟ್ರೀಯ ಪರಿಶಿಷ್ಟ ಪಂಗಡದ ಆಯೋಗ  ಇಂದು ವಿಧಾನಸೌಧದಲ್ಲಿ ಪ್ರಗತಿ ಪರಿಶೀಲನೆ ನಡೆಸಿತು.ಸಭೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದರು‌. ಕರ್ನಾಟಕದಲ್ಲಿ ಗಿರಿಜನ ಕಲ್ಯಾಣಕ್ಕಾಗಿ ಕೈಗೊಂಡಿರುವ ಕ್ರಮಗಳು, ವಸತಿ ನಿಲಯಗಳ ಕುರಿತು ಸಭೆಯಲ್ಲಿ ಆಯೋಗದ ಅಧ್ಯಕ್ಷರು ವಿವರ ಪಡೆದು, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಸಂಬಂಧ ಚರ್ಚಿಸಲಾಯಿತು.

ಸಭೆಯ ಬಳಿಕ ಆಯೋಗದ ಅಧ್ಯಕ್ಷ ನಂದ್ ಕುಮಾರ್ ದೇಸಾಯಿ ಸುದ್ದಿಗೋಷ್ಠಿಯಲ್ಲಿ ಸಭೆಯ ವಿವರ ನೀಡಿ, ರಾಜ್ಯದಲ್ಲಿ ಪರಿಶಿಷ್ಟ ಪಂಗಡದ ಸಮುದಾಯಕ್ಕೆ  ದೊರೆಯುತ್ತಿರುವ ಶೇ.3ರಷ್ಟು ಮೀಸಲಾತಿಯನ್ನು ಶೇ 7.5 ಕ್ಕೆ ಏರಿಸುವ ಬಗ್ಗೆ ಬೇಡಿಕೆ ಕೇಳಿಬಂದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಗಿರಿಜನರಿಗೆ ಕೇವಲ ಶೇಕಡಾ 3ರಷ್ಟು ಮಾತ್ರ ಮೀಸಲಾತಿ ಸಿಗುತ್ತಿದೆ. ಇದರ ಪ್ರಮಾಣ ಹೆಚ್ಚಳವಾಗಬೇಕು. ಅದಕ್ಕಾಗಿಯೇ ಕರ್ನಾಟಕ ಸರ್ಕಾರ ನಿವೃತ್ತ ನ್ಯಾಯಮೂರ್ತಿಯವರ ಸಮಿತಿ ರಚನೆ ಮಾಡಿದೆ. ಸಮಿತಿ ವರದಿಯಾಧಾರಿಸಿ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದರು.ಸಮುದಾಯಕ್ಕೆ ಸರ್ಕಾರವೇ ಜಮೀನು ಖರೀದಿಸಿ ನೀಡುತ್ತಿದೆ. ವ್ಯಾಪಾರಕ್ಕೆ  ಅಂಗಡಿ ಉದ್ಯೋಗ ಸ್ಥಾಪನೆಗೆ ಸಹಾಯಧನ ನೀಡಲಾಗುತ್ತಿದೆ. ನಿರುದ್ಯೋಗಿಗಳಿಗೆ ವಾಹನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳನ್ನು ಕೊರೆಸಲಾಗುತ್ತಿದೆ. ರಾಜ್ಯ ಸರ್ಕಾರ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಉತ್ತಮ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸಮರ್ಪಕ ಅನುಷ್ಠಾನವಾಗುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದರು.

ಗಿರಿಜನರ ನೇಮಕಾತಿ ಪ್ರಮಾಣ ಕಡಿಮೆ ಇದೆ. ಗಿರಿಜನ ಬುಡಕಟ್ಟು ಜ‌ನರಿಗೆ ಮೀಸಲಾದ ಹುದ್ದೆಗಳಲ್ಲಿ ಇನ್ನೂ ಶೇಕಡಾ 50 ರಷ್ಟು ಹುದ್ದೆಗಳು ಖಾಲಿ ಇವೆ‌. ಅದರಲ್ಲೂ ಗಿರಿಜನ ಬುಡಕಟ್ಟು ಪ್ರದೇಶದಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಅವುಗಳ ಶೀಘ್ರ ಭರ್ತಿಗೆ ಸೂಚನೆ ನೀಡಲಾಗಿದೆ. ಕರ್ನಾಟಕದಲ್ಲಿ ಬುಡಕಟ್ಟು ಜನರ ಪ್ರಮಾಣ ಶೇಕಡಾ 7ರಷ್ಟಿದೆಯಾದರೂ ಮೀಸಲಾತಿ ಕೇವಲ ಶೇಕಡಾ 3ರಷ್ಟು ನಿಗದಿಯಾಗಿದೆ. ಇದನ್ನು ಸರಿಪಡಿಸುವಂತೆ ಸೂಚನೆ ನೀಡಲಾಗಿದೆ ಎಂದರು.ಆರೋಗ್ಯ ಇಲಾಖೆ ಮೂಲಕ ಗುಡ್ಡಗಾಡು ಪ್ರದೇಶದಲ್ಲಿ ಸಂಚಾರಿ ಆರೋಗ್ಯ ವಾಹನ ವ್ಯವಸ್ಥೆ ಮಾಡಲಾಗಿದೆ. ಗಿರಿಜನರ ಪ್ರಾಚೀನ ವೈದ್ಯ ಪದ್ದತಿ ಹಾಗೂ ಗಿಡಮೂಲಿಕೆಗಳ ಸಂರಕ್ಷಣೆ ಕೈಗೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದ್ದೇವೆ. ಪಾರಂಪರಿಕ ಆರೋಗ್ಯ ಪದ್ಧತಿಯಡಿ ಚಿಕಿತ್ಸೆ ನೀಡುವ ಸಮುದಾಯದವರಿಗೆ ಸೂಕ್ತ ತರಬೇತಿ ನೀಡಿ ಆರೋಗ್ಯ ಪದ್ಧತಿಯನ್ನು ಆಯುಷ್ ಇಲಾಖೆ ಮೂಲಕ ಪ್ರೋತ್ಸಾಹ ನೀಡುವಂತೆ ಸೂಚಿಸಲಾಗಿದೆ ಎಂದು ನಂದ್ ಕುಮಾರ್ ದೇಸಾಯಿ ಸ್ಪಷ್ಟಪಡಿಸಿದರು.

ಸಮುದಾಯದ ಅಭಿವೃದ್ಧಿ ಸಂಬಂಧ ಅಧಿಕಾರಿಗಳೊಂದಿಗೆ ಸಮರ್ಪಕ ಮಾತುಕತೆ ನಡೆದಿದ್ದು, ರಾಜ್ಯ ಸರ್ಕಾರದಿಂದ  ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿ ಆ ಮೂಲಕ ಸಮೃದ್ಧ ಭಾರತ ನಿರ್ಮಾಣದಲ್ಲಿ ಈ ಸಮುದಾಯಗಳ ಪಾತ್ರವೂ ಮುಖ್ಯವಾಗುವಂತೆ ನೋಡಿಕೊಳ್ಳಬೇಕು.ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ, ಗುಡ್ಡಗಾಡು ಪ್ರದೇಶದಲ್ಲಿ ಶಿಕ್ಷಕರ ಕೊರತೆ ನೀಗಿಸಲು ಆದಷ್ಟು ಬೇಗ ನೇಮಕ ಮಾಡಲು ಸೂಚಿಸಲಾಗಿದೆ.ಅನೇಕರು ಸುಳ್ಳು ದಾಖಲೆ ನೀಡಿ ಸಮುದಾಯದ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರಿ ನೌಕರಿ ಪಡೆಯುತ್ತಿದ್ದಾರೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದೆ. ಮಹಾರಾಷ್ಟ್ರದಲ್ಲಿ ಲಕ್ಷಾಂತರ ಜನರು, ಉತ್ತರ ಪ್ರದೇಶದಲ್ಲಿ ಪಂಡಿತ್ ಸಮುದಾಯದ ಜನರು ಸಹ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಪ್ರಕರಣ ವಿಚಾರಣೆ ವಿಳಂಬವಾಗುತ್ತಿದೆ. ಅದನ್ನು ಆದಷ್ಟು ಬೇಗ ಇತ್ಯರ್ಥಗೊಳಿಸಲು ಶ್ರಮಿಸಲಾಗುತ್ತಿದೆ ಎಂದರು.ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಕುಮಾರ ನಾಯ್ಕ್ ಮಾತನಾಡಿ, ಪಂಗಡದ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಶಾಲೆಗಳನ್ನು ತೆರೆದು ಗುತ್ತಿಗೆಯಾಧಾರದಲ್ಲಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಶೀಘ್ರವೇ ಖಾಲಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು‌.