ಲೋಕದರ್ಶನ ವರದಿ
ಬೈಲಹೊಂಗಲ 07: ವರ್ಷದ ಒಂಬತ್ತು ತಿಂಗಳು ಗಡಿಯಲ್ಲಿ ಶತ್ರುಗಳೊಂದಿಗೆ ತಮ್ಮ ಪ್ರಾಣವನ್ನು ದೇಶ ಸೇವೆಗೆ ಪಣಕ್ಕಿಟ್ಟು ,ಉಳಿದ ಮೂರು ತಿಂಗಳು ತಮಗೆ ಸಿಕ್ಕಿರುವ ರಜಾ ದಿನಗಳನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟಿರುವ ಅಪರೂಪದ ದೇಶ ಭಕ್ತ ಈ ಸೈನಿಕನ ಕುರಿತು ಎಷ್ಟು ಹೇಳಿದರೂ ಕಡಿಮೆ. ಈತ ದೇಶ ಭಕ್ತನಷ್ಟೇ ಅಲ್ಲ,ಸಮಾಜ ಸೇವಕ ಕೂಡ. ಯುವಕರ ಕಣ್ಮಣಿ,ಪರಿಸರ ಪ್ರೇಮಿ, ಬಡವರ ಬಂಧು,ಶಿಕ್ಷಣ ಪ್ರೇಮಿ, ಯುವಕರ ಆಧಾರನಾದ ಈತ ಬೇರಾರೂ ಅಲ್ಲ .ಕಿತ್ತೂರ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನಂಥ ವೀರ-ಶೂರರು ಜನ್ಮ ತಳೆದ ಗಂಡು ಮೆಟ್ಟಿನ ನಾಡು, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಗ್ರಾಮದ ವೀರ ಯೋಧ ವೀರೂ ಶಿವಬಸಪ್ಪ ದೊಡ್ಡವೀರಪ್ಪನವರ ಇವರು ಮಧ್ಯಮ ಕುಟುಂಬದಲ್ಲಿ ಜನಿಸಿ 16 ವರ್ಷದಿಂದ ದೇಶ ಸೇವೆಯಲ್ಲಿ ತೊಡಗಿರುವ ಇವರು ಬೈಲಹೊಂಗಲದ ಮೂರು ಸಾವಿರ ಮಠದಲ್ಲಿ ರಾಜ್ಯ ಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿರುವ ಯೋಧ. ಬಳಿಕ ಕುವೆಂಪು ವಿಶ್ವ ವಿದ್ಯಾಲಯದಿಂದ ಎಂ.ಎ ಪದವಿ ಪಡೆದಿರುವ ಇವರು ಕೆಲ ವರ್ಷಗಳ ಹಿಂದೆ ತಂದೆಯ ಲಿಂಗೈಕ್ಯರಾಗಿದ್ದಾರೆ. ಆದರೆ ಇವರ ತಾಯಿ ಗಂಗಮ್ಮ ಅವರ ಮಮತೆ ಇವರಿಗೆ ಶ್ರೀರಕ್ಷೆ.ಅಣ್ಣ ಒಕ್ಕಲುತನ ನೋಡಿಕೊಳ್ಳುತ್ತಾರೆ.ತಮ್ಮ ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಮಂಜುಳಾ ಅವರು ಬಿ.ಇ.ಪದವಿಧರೆ.ಮುದ್ದು ಮಗ ಅದ್ವಿಕ ಓದುತ್ತಿದ್ದಾನೆ.ಇವರು ಗುಜರಾತ ರಾಜ್ಯದ ಜಾಮನಗರದಲ್ಲಿ ಸೈನಿಕ ಸೇವೆಯಲ್ಲಿ ನಿರತರಾಗಿದ್ದಾರೆ. ಇವರಿಗಿರುವ ಸಮಾಜ ಸೇವೆಯ ತುಡಿತ-ಕಾಳಜಿ ನೋಡಿದರೆ ಎಂಥ ರಾಜಕೀಯ ವ್ಯಕ್ತಿಗಳು ಸಹ ಒಂದು ಕ್ಷಣ ಯೋಚಿಸಲೇಬೇಕಾದ ಸಂಗತಿ, ಏಕೆಂದರೆ ಇವರು ಸಮಾಜಕ್ಕಾಗಿ ಹಮ್ಮಿಕೊಳ್ಳುವ ಸೇವೆಗಳೇ ಹಾಗಿವೆ. ಹಳ್ಳಿಗಳ ಸಂಪೂರ್ಣ ಸ್ವಚ್ಚತೆಗಾಗಿ ಸ್ವಚ್ಚತಾ ಅಭಿಯಾನ, ಪರಿಸರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲು ಉಚಿತ ಸಸಿಗಳ ವಿತರಣೆ,ಶಾಲಾ ಮಕ್ಕಳಿಗೆ ಪ್ರೊತ್ಸಾಹ-ಪುರಸ್ಕಾರ ನೀಡುವುದು,ಸಿಹಿ ಊಟ ಬಡಿಸುವುದು, ಶಾಲಾ ಕಾಲೇಜುಗಳಿಗೆ ಅವಶ್ಯವಿರುವ ವಸ್ತುಗಳ ದೇಣಿಗೆ ನೀಡುವುದು, ಬಡ ಯುವಕರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ಕಾರ್ಯಾಗಾರಗಳನ್ನು ಏರ್ಪಡಿಸುವುದು, ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ನಡೆಯುವ ಸಮಾಜ ಪರ ಹೋರಾಟಗಳಲ್ಲಿ ಭಾಗಿಯಾಗುವುದು ಮುಂತಾಗಿ ಸಾಮಾಜಿಕ ಕಾರ್ಯಗಳಲ್ಲಿ ಸದಾ ತಲ್ಲೀನವಾಗಿರುವ ಅಪರೂಪದ ವ್ಯಕ್ತಿ ಇವರು ಯುವಕರಿಗೆ ಆದರ್ಶ ವ್ಯಕ್ತಿ.ದೇಶಕ್ಕಾಗಿ ಹೋರಾಡಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಮಹಾತ್ಯಾಗಿಗಳ, ದೇಶ ಭಕ್ತರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು.ಯುವ ಪೀಳಿಯಲ್ಲಿ ದೇಶ ಭಕ್ತಿಯನ್ನು ಹುಟ್ಟಿಸಲು ದೇಶ ಭಕ್ತಿ ಜಾಗೃತಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಇವರ ಪ್ರೀತಿಯ ಹವ್ಯಾಸ.
ಯೋಧ ವೀರೂ ಹೆಚ್ಚಾಗಿ ರಜೆಯನ್ನು ಪಡೆದುಕೊಂಡು ಬರುವುದೇ ರಾಷ್ಟೀಯ ದಿನಗಳಾದ ಜನೇವರಿ 26 ಮತ್ತು ಅಗಷ್ಟ 15 ರಂದು ಮಾತ್ರ. ಆ ದಿನಗಳಂದು ತಮ್ಮ ಗೆಳೆಯರ ಬಳಗದಿಂದ ರಾಷ್ಟೀಯ ಹಬ್ಬದ ಹರಿದಿನಗಳ ಸಂದರ್ಭಗಳಲ್ಲಿ ಅತಿ ವಿಜೃಂಭಣೆ ಹಾಗೂ ಉತ್ಸಾಹದಿಂದ ಆಚರಣೆಯಲ್ಲಿ ಪಾಲ್ಗೊಂಡು ಯುವಕರಲ್ಲಿ ದೇಶಭಕ್ತಿ, ದೇಶಪ್ರೇಮದ ಬೀಜ ಬಿತ್ತುವ ಕಾರ್ಯ ಮಾಡುತ್ತಿರುವರು. ಒಂದು ಕ್ಷಣ ಯೋಚನೆ ಮಾಡಿದರೆ ಗೊತ್ತಾಗುವುದೇನೆಂದರೆ ದೇಶ ಸೇವೆ ಎಂಬ ಎಡೆಬಿಡದ ಮಹಾ ಕಾಯಕದಲ್ಲಿದ್ದರೂ ಸಹ ಸಮಾಜ ಸೇವೆ ಎಂಬ ಕಾಯಕ ಮೈಗೂಡಿಸಿಕೊಂಡಿರುವ ಇವರು ನಿಜವಾದ ದೇಶಪ್ರೇಮಿ ಸೈನಿಕ ಹಾಗೂ ಸಮಾಜಮುಖಿ ಸೇವಕ.
ಇನ್ನು ಕೆಲವೇ ತಿಂಗಳುಗಳಲ್ಲಿ ಸೈನಿಕ ವೀರೂ ತಮ್ಮ 17 ವರ್ಷಗಳ ದೇಶ ಸೇವೆಯ ಕಾಯಕವನ್ನು ಸಮರ್ಥ ಹಾಗೂ ಅಚ್ಚು ಕಟ್ಟಾಗಿ ಮುಗಿಸಿಕೊಂಡು ಬಂದು ಸಂಪೂರ್ಣವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆ ಉಳ್ಳವರಾಗಿದ್ದಾರೆ.ಇಂಥ ಪ್ರಾಮಾಣಿಕ ಸೇವೆ ಮಾಡುವ ವ್ಯಕ್ತಿಗಳು ಈಗಿನ ನಮ್ಮ ಸಮಾಜ ಸೇವೆಗೆ ಅತಿ ಅವಶ್ಯಕ ಎನ್ನುತ್ತಾರೆ ಜನ ಹೆಮ್ಮೆಯಿಂದ.
ಯೋಧ ವೀರೂ ಸೈನ್ಯದಲ್ಲಿ ಕಾರ್ಯ ನಿರ್ವಹಿಸುವಾಗ ತಮ್ಮ ವಿಶ್ರಾಂತಿ ವೇಳೆಯಲ್ಲಿ ತಮ್ಮ ಎಲ್ಲ ಆತ್ಮೀಯರೊಂದಿಗೆ ಸಮಾಜ ಪರವಾದ ಕೆಲಸಗಳ ಬಗ್ಗೆ ಸುದೀರ್ಘ ಸಮಾಲೋಚನೆಯನ್ನು ನಡೆಸಿ ರಜೆಗೆ ಬಂದಾಗ ಸಮಾಜ ಚಿಂತಕರೊಂದಿಗೆ ಕೂಡಿಕೊಂಡು ಈ ಕೆಲಸಗಳನ್ನು ಕಾರ್ಯರೂಪಕ್ಕೆ ತರುತ್ತಾರೆ. ಇದಕ್ಕೆ ಒಳ್ಳೆಯ ಉದಾಹರಣೆ ಎಂದರೆ ಸವದತ್ತಿ ತಾಲೂಕಿನ ಮರಕುಂಬಿ ಗ್ರಾಮದ ಹುತಾತ್ಮ ಯೋಧ ಮಲ್ಲಪ್ಪ ಜಕಾತಿ ಅವರ ಸ್ಮಾರಕದ ಕೆಲಸ ಹದಿನೈದು ವರ್ಷದಿಂದ ನೆನೆಗುದಿಗೆ ಬಿದ್ದಿತ್ತು.ಈ ಸ್ಮಾರಕ ನಿರ್ಮಾಣದ ಕೆಲಸವನ್ನು ಗೆಳೆಯರ, ಹಿತೈಷಿಗಳ, ಸಹಚಿಂತಕರ ಸಹಕಾರದೊಂದಿಗೆ ಈಗ ಮುಕ್ತಾಯದ ಹಂತಕ್ಕೆ ತರುವಲ್ಲಿ ಈ ಸೈನಿಕ ಯಶಸ್ವಿಯಾಗುವ ಮಟ್ಟದಲ್ಲಿದ್ದಾರೆ. ಇಂಥ ಮಹಾನ ಸಮಾಜ ಸೇವೆಗಳ ಕಾರ್ಯಗಳನ್ನು ಗಮನಿಸಿ ಸಹಸ್ರಾರು ಜನರು ತನು-ಮನ-ಧನದಿಂದ ಇವರೊಂದಿಗೆ ಕೈ ಜೋಡಿಸ ತೊಡಗಿದ್ದಾರೆ. ಹೆಗಲಿಗೆ ಹೆಗಲು ಕೊಟ್ಟು ಸಹಕರಿಸುತ್ತಿರುವ ಗೆಳೆಯರ ಬಳಗ ಹಾಗೂ ಆತ್ಮೀಯರ ಪಡೆಯೊಂದಿಗೆ ಇನ್ನು ಕೆಲವೇ ದಿನಗಳಲ್ಲಿ ಹುತಾತ್ಮ ಯೋಧ ಮರಕುಂಬಿಯ ಮಲ್ಲಪ್ಪ ಜಕಾತಿ ಅವರ ಸ್ಮಾರಕ ಉದ್ಘಾಟನೆಗೊಳಿಸುವ ಮಹತ್ತರ ಕಾರ್ಯ ಕೈಕೊಳ್ಳುವ ಯೋಚನೆಯಲ್ಲಿದ್ದಾರೆ ವೀರ ವೀರೂ.ಅವರ ಸಮಾಜಮುಖಿ ಕಾರ್ಯಗಳ ಕಳಕಳಿಗೆ ನಾಡಿನ ಜನತೆಯ ಶುಭೇಚ್ಛೆಗಳು.
*"ಜೈ ಹಿಂದ, ಜೈ ಭಾರತ, ಜೈ ಕರ್ನಾಟಕ."*
ಈಶ್ವರ ಜಿ.ಸಂಪಗಾವಿ
( ಸಂಗ್ರಹ)
ಕಕ್ಕೇರಿ (9741606280)