ಈ ಬೌಲರ್ ಹಾಶೀಮ್ ಆಮ್ಲಾಗೆ ನಿದ್ದೆಗೆಡಿಸಿದ್ದರಂತೆ..!

ಕೇಪ್ ಟೌನ್, ಆ 10     ದಕ್ಷಿಣ ಆಫ್ರಿಕಾದ ಸಾರ್ವಕಾಲಿಕ ಶ್ರೇಷ್ಠ  ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾದ ಹಾಶೀಮ್ ಆಮ್ಲಾ ಕಿಂಚಿತ್ತೂ ಸುಳಿವು ನೀಡದೆ ಗುರುವಾರ  ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಹಠಾತ್ತನೆ ನಿವೃತ್ತಿ ಘೋಷಿಸಿಬಿಟ್ಟರು.  

36 ವರ್ಷದ ಅನುಭವಿ ಆರಂಭಿಕ ಬ್ಯಾಟ್ಸ್ಮನ್ ನಿವೃತ್ತಿ ನಂತರ ನೀಡಿರುವ  ಸಂದರ್ಶನವೊಂದರಲ್ಲಿ ತಮ್ಮ ವೃತ್ತಿ ಬದುಕಿನಲ್ಲಿ ಎದುರಿಸಿದ ಅತ್ಯಂತ ಅಪಾಯಕಾರಿ ವೇಗದ  ಬೌಲರ್ ಯಾರೆಂಬುದನ್ನು ಬಾಯ್ಬಿಟ್ಟಿದ್ದಾರೆ. ಅಂದಹಾಗೆ ಆಮ್ಲಾ ಹೆಸರಿಸಿದ ಬೌಲರ್  ಯಾರೆಂದು ಹೇಳಿದರೆ ನಿಜಕ್ಕೂ ನಂಬುವುದು ಕಷ್ಟವಾಗುತ್ತದೆ. 

ದಕ್ಷಿಣ ಆಫ್ರಿಕಾ ಪರ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಒಟ್ಟು 349  ಪಂದ್ಯಗಳನ್ನಾಡಿ 18,672 ರನ್ಗಳನ್ನು ಗಳಿಸಿರುವ ಆಮ್ಲಾ, 55 ಶತಕಗಳು ಮತ್ತು 88  ಅರ್ಧಶತಕಗಳನ್ನೂ ದಾಖಲಿಸಿದ್ದಾರೆ. ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ಹರಿಣ ಪಡೆಯ ಪರ  ತ್ರಿಶತಕ ದಾಖಲಿಸಿದ ಏಕೈಕ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಅವರದ್ದು.  ಹೀಗಿರುವಾಗ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಆಸಿಫ್ ಎದುರು ಬ್ಯಾಟಿಂಗ್  ಮಾಡುವುದು ಕಷ್ಟ ಎಂದು ಆಮ್ಲಾ ಹೇಳಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ಅಷ್ಟೇ  ಅಲ್ಲದೆ ಆಸಿಫ್ ಎದುರು ಬ್ಯಾಟಿಂಗ್ ಯಾಕೆ ಕಷ್ಟ ಎಂಬುದನ್ನೂ ಆಮ್ಲಾ ವಿವರಿಸಿದ್ದಾರೆ. 

ಮೊಹಮ್ಮದ್ ಆಮಿರ್ ನಾನು ಎದುರಿಸಿದ ಶ್ರೇಷ್ಠ ವೇಗದ ಬೌಲರ್. ಅವರು ಮ್ಯಾಚ್  ಫಿಕ್ಸಿಂಗ್ ಮೂಲಕ ನಿಷೇಧಕ್ಕೊಳಗಾದರು ಎಂಬುದು ನನಗೆ ತಿಳಿದಿದೆ. ಆದರೂ, ನಾನು  ಎದುರಿಸಿದ ಅಪಾಯಕಾರಿ ವೇಗಿ ಅವರೇ. ಅವರಲ್ಲಿ ವೇಗ ಹೇಳಿಕೊಳ್ಳುವಷ್ಟೇನು ಇರಲಿಲ್ಲ.  ಗಂಟೆಗೆ 135 ಕಿ.ಮೀ ವೇಗದಲ್ಲಷ್ಟೇ ಬೌಲಿಂಗ್ ಮಾಡುತ್ತಿದ್ದರು. ಆದರೆ,  ಕಷ್ಟವಾಗುತ್ತಿದ್ದದ್ದು ಅವರ ನಿಖರವಾದ ಎಸೆತಗಳು. ನಿಖರತೆ ಮೂಲಕವೇ ನಿಮ್ಮ ರಕ್ಷಣಾತ್ಮಕ  ಬ್ಯಾಟಿಂಗ್ ಕಲೆಗೆ ಸವಾಲೊಡ್ಡುತ್ತಿದ್ದರು. ಹಲವು ವರ್ಷಗಳ ಕ್ರಿಕೆಟ್  ವೃತ್ತಿಬದುಕಿನಲ್ಲಿ ವಿವಿಧ ತಂಡಗಳ ಹಲವು ಬ್ಯಾಟ್ಸ್ಮನ್ಗಳ ಪರಿಚಯವಾಗಿದೆ. ತಮಾಶೆ  ವಿಚಾರವೆಂದರೆ ಆಸಿಫ್ ಕುರಿತಾಗಿ ಪ್ರತಿಯೊಬ್ಬರ ಅಭಿಪ್ರಾಯವೂ ಇದೇ ಆಗಿದೆ," ಎಂದು ತಮ್ಮ  ನಿದ್ರೆ ಕೆಡಿಸಿದ್ದ ಬೌಲರ್ ಬಗ್ಗೆ ಆಮ್ಲಾ ಮಾತನಾಡಿದ್ದಾರೆ.