ನವದೆಹಲಿ, ಫೆ 3,ಕೇರಳ ರಾಜ್ಯದಲ್ಲಿ ಸೋಮವಾರ ಮತ್ತೊಂದು ಕರೊನವೈರಸ್ ನ ಪ್ರಕರಣ ಪತ್ತೆಯಾಗುವುದರೊಂದಿಗೆ ಭಾರತದಲ್ಲಿ ಮೂರನೇ ಪ್ರಕರಣ ದೃಢಪಟ್ಟಿದೆ. ಕೇರಳದಲ್ಲಿ ಪತ್ತೆಯಾದ ಹಿಂದಿನ ಎರಡು ಪ್ರಕರಣಗಳಂತೆ ಈ ರೋಗಿಯೂ ಸಹ ಚೀನಾಗೆ ಭೇಟಿ ನೀಡಿ ಬಂದಿದ್ದವರಾಗಿದ್ದಾರೆ. ಆರೋಗ್ಯ ಸಚಿವಾಲಯದ ಪ್ರಕಾರ, ರೋಗಿಯನ್ನು ಆಸ್ಪತ್ರೆಯ ಪ್ರತ್ಯೇಕ ವಾರ್ಡ್‍ನಲ್ಲಿ ಇರಿಸಲಾಗಿದ್ದು, ಸದ್ಯ ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ವೈರಸ್ ಸೋಂಕು ಅಪಾಯದಲ್ಲಿರುವ ಕೇರಳದ 1,900 ಕ್ಕೂ ಹೆಚ್ಚು ಜನರು ತಮ್ಮ ಮನೆಗಳಲ್ಲಿ ಕಣ್ಗಾವಲಿನಲ್ಲಿದ್ದಾರೆ. ರಾಜ್ಯಾದ್ಯಂತ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್‍ಗಳಲ್ಲಿ ಎಪ್ಪತ್ತು ಜನರ ಆರೋಗ್ಯದ ಮೇಲೆ ನಿಗಾ ಇಡಲಾಗುತ್ತಿದೆ.
ಕೊರೊನವೈರಸ್ ಹರಡುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಜ 15 ರ ನಂತರ ಚೀನಾದಿಂದ ಆಗಮಿಸಿದ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯ ಪರೀಕ್ಷಿಸಲು ಸರ್ಕಾರ ನಿರ್ಧರಿಸಿದೆ. ಚೀನಾದಿಂದ ಆಗಮಿಸುವವರು ಯಾರೊಂದಿಗೂ ಬೆರೆಯದೆ ತಮ್ಮ ಮನೆಯಗಳಲ್ಲೇ ಪ್ರತ್ಯೇಕವಾಗಿ 14 ದಿನಗಳ ಕಾಲ ಇರುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಈ ಮಧ್ಯೆ, ಕೇರಳದಲ್ಲಿ ಕರೊನವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿ ಜಿಲ್ಲೆಗಳಾದ ಚಾಮರಾಜನಗರ, ಮೈಸೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಿದೆ.
ಚೀನಾದ ವುಹಾನ್ ನಗರದಲ್ಲಿ ಮೊದಲು ಪತ್ತೆಯಾದ ಕರೋನವೈರಸ್ ಸೋಂಕು ಈಗ ವಿಶ್ವದ 25 ದೇಶಗಳಿಗೆ ಹರಡಿದೆ. ಚೀನಾದಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 361 ಕ್ಕೆ ಏರಿದೆ. ಸೋಂಕಿನ ಒಟ್ಟು ಪ್ರಕರಣಗಳು 17,205 ಕ್ಕೆ ತಲುಪಿವೆ. 21,558 ಶಂಕಿತ ಪ್ರಕರಣಗಳ ಮೇಲೆ ನಿಗಾ ಇಡಲಾಗಿದೆ.