ಟ್ರಿನಿಡಾಡ್, ಆ 10 ಭಾರತ(ಎ) ಹಾಗೂ ವೆಸ್ಟ್ ಇಂಡೀಸ್(ಎ) ತಂಡಗಳ ನಡುವಿನ ಮೂರನೇ ಅನಧಿಕೃತ ಟೆಸ್ಟ್ ಪಂದ್ಯ ಅಂತಿಮವಾಗಿ ಡ್ರಾ ಆಯಿತು. ಕಳೆದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ್ದ ಭಾರತ 2-0 ಅಂತರದಲ್ಲಿ ಟೆಸ್ಟ್ ಸರಣಿ ತನ್ನದಾಗಿಸಿಕೊಂಡಿತು.
ಇಲ್ಲಿನ ಬ್ರಿಯನ್ ಲಾರ ಕ್ರೀಡಾಂಗಣದಲ್ಲಿ ವಿಕೆಟ್ ನಷ್ಟವಿಲ್ಲದೆ 37 ರನ್ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ವೆಸ್ಟ್ ಇಂಡೀಸ್(ಎ) ನಾಲ್ಕನೇ ಹಾಗೂ ಅಂತಿಮ ದಿನದ ಮುಕ್ತಾಯಕ್ಕೆ 109 ಓವರ್ಗಳಿಗೆ ಆರು ವಿಕೆಟ್ ನಷ್ಟಕ್ಕೆ 314 ರನ್ ಗಳಿಸಿತು. ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.
ಶುಕ್ರವಾರ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್(ಎ) ಗೆಲುವಿಗೆ 336 ರನ್ ಅಗತ್ಯವಿತ್ತು. ಬ್ಯಾಟಿಂಗ್ಗೆ ಇಳಿದ ಮೊಟ್ಸಿನ್ ಹಾಡ್ಜ್ ಹಾಗೂ ಜೆರೆಮಿ ಸೊಲೊಜನೊ ಜೋಡಿಯು ಮುರಿಯದ ಮೊದಲನೇ ವಿಕೆಟ್ಗೆ 68 ರನ್ ಜತೆಯಾಟವಾಡಿತು. ಮೊಟ್ಸಿನ್ ಹಾಡ್ಜ್ ಅವರು ಕೇವಲ 25 ರನ್ ಗಳಿಗೆ ಸೀಮಿತರಾದರು.
ನಂತರ, ಜತೆಯಾದ ಜೆರೆಮಿ ಹಾಗೂ ಬ್ರಾಂಡನ್ ಕಿಂಗ್ ಜೋಡಿ ಅಮೋಘ ಬ್ಯಾಟಿಂಗ್ ಮಾಡಿತು. ಈ ಜೋಡಿ ಭಾರತದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿತು. ಎರಡನೇ ವಿಕೆಟ್ಗೆ 99 ರನ್ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿತು. 82 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 10 ಬೌಂಡರಿಯೊಂದಿಗೆ ಬ್ರಾಂಡನ್ ಕಿಂಗ್ 77 ರನ್ ಗಳಿಸಿದರು. ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಇವರನ್ನು ಶಹಬಾಜ್ ನದೀಮ್ ಕ್ಲೀನ್ ಬೌಲ್ಡ್ ಮಾಡಿದರು.
ನಂತರ, ಆರಂಭದಿಂದಲೂ ತಾಳ್ಮೆಯ ಬ್ಯಾಟಿಂಗ್ ಮಾಡಿದ ಜೆರೆಮಿ 249 ಎಸೆತಗಳಲ್ಲಿ ಎಂಟು ಬೌಂಡರಿಯೊಂದಿಗೆ 92 ರನ್ ಗಳಿಸಿ ಶತಕದಂಚಿನಲ್ಲಿ ಹನುಮ ವಿಹಾರಿಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ ಸುನೀಲ್ ಅಂಬ್ರಿಸ್ 145 ಎಸೆತಗಳಲ್ಲಿ ಒಂದು ಸಿಕ್ಸ್ ಹಾಗೂ ಐದು ಬೌಂಡರಿಯೊಂದಿಗೆ 69 ರನ್ ಗಳಿಸಿದರು.
ಒಟ್ಟಾರೆ, ಅಂತಿಮ ದಿನದ ಮುಕ್ತಾಯಕ್ಕೆ ವೆಸ್ಟ್ ಇಂಡೀಸ್(ಎ) 109 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 314 ರನ್ ದಾಖಲಿಸಿತು. ಅಂತಿಮವಾಗಿ ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು. ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ(ಎ) 2-0 ಅಂತರದಲ್ಲಿ ತನ್ನದಾಗಿಸಿಕೊಂಡಿತು.
ಸಂಕ್ಷಿಪ್ತ ಸ್ಕೋರ್
ಭಾರತ(ಎ)
ಪ್ರಥಮ ಇನಿಂಗ್ಸ್: 201
ದ್ವಿತೀಯ ಇನಿಂಗ್ಸ್: 365
ವೆಸ್ಟ್ ಇಂಡೀಸ್
ಪ್ರಥಮ ಇನಿಂಗ್ಸ್: 194
ದ್ವಿತೀಯ ಇನಿಂಗ್ಸ್: 314/6(109)
ಜೆರೆಮಿ ಸೊಲೊಜನೊ-92
ಬ್ರಾಂಡನ್ ಕಿಂಗ್-77
ಸುನೀಲ್ ಅಂಬ್ರಿಸ್-69
ಬೌಲಿಂಗ್: ಶಹದಾಜ್ ನದೀಮ್ 103 ಕ್ಕೆ 5, ಹನುಮ ವಿಹಾರಿ 23 ಕ್ಕೆ 1