ನವದೆಹಲಿ, ಮಾ ೨೯,ಲಾಕ್ ಡೌನ್ ಜಾರಿಯಲ್ಲಿದ್ದರೂ, ದೇಶದಲ್ಲಿ ಅಡುಗೆ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಗೆ ಯಾವುದೇ ಕೊರತೆ ಇಲ್ಲ ಎಂದು ಭಾರತೀಯ ತೈಲ ನಿಗಮ(ಐಓಸಿ)ದ ಅಧ್ಯಕ್ಷ ಸಂಜೀವ್ ಸಿಂಗ್ ಭಾನುವಾರ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರಿಗೆ ಅಗತ್ಯವಾಗಿರುವ ಪೆಟ್ರೋಲಿಯಂ ಉತ್ಪನ್ನಗಳು ನಿರಂತರವಾಗಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಸಾರ್ವಜನಿಕರು ಗಾಬರಿಗೊಳ್ಳುವ ಆಗತ್ಯವಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಉತ್ಪಾದನೆ ಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಅಡುಗೆ ಅನಿಲ ಸಿಲೆಂಡರ್ ಗಳಿಗಾಗಿ ಜನರು ಮುಂಗಡ ಬುಕಿಂಗ್ ಮಾಡಿ ಗಾಬರಿ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.ಏಪ್ರಿಲ್ ತಿಂಗಳ ನಂತರವೂ ಜನರಿಗೆ ಅಗತ್ಯವಿರುವಷ್ಟು ಪೂರೈಸಲು ಸಜ್ಜುಗೊಂಡಿದ್ದೇವೆ. ಜನರ ಬೇಡಿಕೆಗಳನ್ನು ಪೂರೈಸಲು ಎಲ್ಲಾ ರಿಫೈನರಿಗಳು ಕಾರ್ಯನಿರ್ಬಹಿಸುತ್ತವೆ. ಬಲ್ಕ್ ದಾಸ್ತಾನುಗಳು, ಎಲ್‌ಪಿಜಿ ವಿತರಕರು ಮತ್ತು ಪೆಟ್ರೋಲ್ ಬಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ದೇಶದಲ್ಲಿ ಅಡುಗೆ ಅನಿಲ ಅಥವಾ ಪೆಟ್ರೋಲಿಯಂ ಉತ್ಪನ್ನಗಳಿಗೆ ಯಾವುದೇ ಕೊರತೆಯಿಲ್ಲ ಎಂದು ಇಂಡಿಯಾ ಆಯಿಲ್ ಕಾರ್ಪೊರೇಶನ್‌ನ ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ.